ಸಂಪುಟ ವಿಸ್ತರಣೆ : 20 ಸ್ಥಾನಗಳಿಗೆ 60ಕ್ಕೂ ಹೆಚ್ಚು ಶಾಸಕರು ಲಾಬಿ.. ಹೈಕಮಾಂಡ್‌ನತ್ತ ಎಲ್ಲರ ಚಿತ್ತ!
Views: 55
ಕನ್ನಡ ಕರಾವಳಿ ಸುದ್ದಿ: ರಾಜ್ಯದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ತಿಂಗಳು ಕಳೆದರೂ ಸಚಿವ ಸಂಪುಟ ವಿಸ್ತರಣೆಗೆ ಇನ್ನೂ ಹಸಿರು ನಿಶಾನೆ ಸಿಕ್ಕಿಲ್ಲ. ಮೊದಲ ಹಂತದಲ್ಲಿ ಸಚಿವರ ಪ್ರಮಾಣವಚನ ನಡೆದ ಬಳಿಕ ಉಳಿದಿರುವ 20 ಸಚಿವ ಸ್ಥಾನಗಳಿಗೆ 60ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು ತೀವ್ರ ಲಾಬಿ ನಡೆಸುತ್ತಿದ್ದಾರೆ. ಇದರಿಂದಾಗಿ ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆ ಕಾಂಗ್ರೆಸ್ ಹೈಕಮಾಂಡ್‌ಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಸಚಿವ ಸ್ಥಾನಕ್ಕಾಗಿ ಹಿರಿಯ ಹಾಗೂ ಕಿರಿಯ ಶಾಸಕರು ತಮ್ಮ ರಾಜಕೀಯ ಪ್ರಭಾವವನ್ನು ಬಳಸಿಕೊಂಡು ದೆಹಲಿಯಲ್ಲಿ ಹಾಗೂ ಬೆಂಗಳೂರಿನಲ್ಲಿ ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ. ಎರಡನೇ ಪಟ್ಟಿಯಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿರುವ ಹಲವು ನಾಯಕರು ಯಾವುದೇ ಕ್ಷಣದಲ್ಲಿ ಹೈಕಮಾಂಡ್‌ನಿಂದ ಕರೆ ಬರಬಹುದು ಎಂಬ ಆಶಾಭಾವನೆಯಲ್ಲಿದ್ದಾರೆ.
ಬೆಳಗಾವಿ ಜಿಲ್ಲೆಯಿಂದಲೇ ಆರು ಮಂದಿ ಶಾಸಕರು ಸಚಿವ ಸ್ಥಾನಕ್ಕಾಗಿ ಪ್ರಬಲ ಪೈಪೋಟಿ ನಡೆಸುತ್ತಿದ್ದಾರೆ. ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಲಕ್ಷ್ಮಣ್ ಸವದಿ, ಅಶೋಕ್ ಪಟ್ಟಣ್ ಹಾಗೂ ಆಸಿಫ್ ಸೇಠ್ ಸೇರಿದಂತೆ ಹಲವು ನಾಯಕರು ಸಚಿವ ಸ್ಥಾನಕ್ಕೆ ತಮ್ಮ ಹಕ್ಕು ಮಂಡಿಸಿದ್ದಾರೆ.
ದೆಹಲಿ ನಿರ್ಧಾರಕ್ಕೆ ಕಾಯುತ್ತಿರುವ ಕಾಂಗ್ರೆಸ್
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದೆಹಲಿಗೆ ಮರಳಿದ್ದು, ವಿದೇಶ ಪ್ರವಾಸ ಮುಗಿಸಿ ರಾಹುಲ್ ಗಾಂಧಿಯವರೂ ಭಾರತಕ್ಕೆ ಬಂದಿದ್ದಾರೆ. ಈ ಇಬ್ಬರು ನಾಯಕರು ಸಭೆ ನಡೆಸಿದ ಬಳಿಕ ಸಚಿವ ಸಂಪುಟ ವಿಸ್ತರಣೆ ಕುರಿತು ಅಂತಿಮ ನಿರ್ಧಾರವಾಗುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಆದರೆ, ನಾಯಕತ್ವ ಬದಲಾವಣೆಯ ವೇಳೆ ವೇಗವಾಗಿ ನಿರ್ಧಾರ ಕೈಗೊಂಡಿದ್ದ ಹೈಕಮಾಂಡ್ ಈಗ ಸಚಿವ ಸಂಪುಟ ವಿಸ್ತರಣೆಯಲ್ಲಿ ವಿಳಂಬ ಮಾಡುತ್ತಿರುವುದು ಸಚಿವಾಕಾಂಕ್ಷಿಗಳಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಸಂಪುಟ ವಿಸ್ತರಣೆಗೆ ಯಾವ ಅಂಶಗಳು ಅಡ್ಡಿಯಾಗಿವೆ ಎಂಬ ಪ್ರಶ್ನೆಗೆ ಕಾಂಗ್ರೆಸ್ ವಲಯದಲ್ಲೂ ಸ್ಪಷ್ಟ ಉತ್ತರ ಸಿಗುತ್ತಿಲ್ಲ.
ಸಚಿವ ಸಂಪುಟ ವಿಸ್ತರಣೆ ಕುರಿತ ಅಂತಿಮ ನಿರ್ಧಾರ ದೆಹಲಿಯ ಕಾಂಗ್ರೆಸ್ ಹೈಕಮಾಂಡ್ ಕೈಯಲ್ಲಿದ್ದು, ಕೂಡಲೇ ಈ ಬಗ್ಗೆ ಸ್ಪಷ್ಟತೆ ಸಿಗುವ ನಿರೀಕ್ಷೆಯಿದೆ.






