ಮದುವೆಯಾಗುವಂತೆ ತಾಯಿಯಿಂದ ಪದೇ ಪದೆ ಒತ್ತಡ: ತಲೆ ಬೋಳಿಸಿಕೊಂಡು ಅಸಮಾಧಾನ ಹೊರಹಾಕಿದ ಮಗಳು!
Views: 1
ಕನ್ನಡ ಕರಾವಳಿ ಸುದ್ದಿ: ಮದುವೆಯಾಗುವಂತೆ ಕುಟುಂಬದಿಂದ, ವಿಶೇಷವಾಗಿ ತಾಯಿಯಿಂದ ನಿರಂತರ ಒತ್ತಡ ಎದುರಿಸುತ್ತಿದ್ದ ಯುವತಿಯೊಬ್ಬಳು ಎಲ್ಲರನ್ನೂ ಬೆಚ್ಚಿಬೀಳಿಸುವ ನಿರ್ಧಾರ ತೆಗೆದುಕೊಂಡಿದ್ದಾಳೆ. ಮದುವೆಯಾಗುವ ಇಚ್ಛೆಯೇ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರೂ ಒತ್ತಡ ಮುಂದುವರೆದ ಹಿನ್ನೆಲೆಯಲ್ಲಿ, ಕೇರಳದ ಕೀರ್ತನಾ ಮೆನನ್ ಎಂಬ ಯುವತಿಯು ತಲೆ ಬೋಳಿಸಿಕೊಂಡು ಅಸಮಾಧಾನ ಹೊರಹಾಕಿದ್ದಾಳೆ.
ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಸಾವಿರಾರು ಮಂದಿ ಪರ-ವಿರೋಧದ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ಕೀರ್ತನಾ ಅವರ ನಿರ್ಧಾರವನ್ನು ವೈಯಕ್ತಿಕ ಸ್ವಾತಂತ್ರ್ಯದ ಪ್ರತೀಕ ಎಂದು ಬೆಂಬಲಿಸಿದರೆ, ಇನ್ನೂ ಕೆಲವರು ಇಂತಹ ನಿರ್ಧಾರ ಅಗತ್ಯವಿತ್ತೆ? ಎಂದು ಪ್ರಶ್ನಿಸಿದ್ದಾರೆ.
ಏನಿದು ಘಟನೆ?
ಮದುವೆಯಾಗುವಂತೆ ತಾಯಿಯಿಂದ ಪದೇ ಪದೆ ಒತ್ತಡ ಬರುತ್ತಿತ್ತು ಎನ್ನಲಾಗಿದೆ. ಆದರೆ, ಕೀರ್ತನಾ ಮೆನನ್ ಅವರಿಗೆ ಮದುವೆಯಾಗುವ ಯಾವುದೇ ಆಸಕ್ತಿ ಇರಲಿಲ್ಲ. ತಮ್ಮ ನಿರ್ಧಾರವನ್ನು ಕುಟುಂಬಕ್ಕೆ ಹಲವು ಬಾರಿ ತಿಳಿಸಿದರೂ ಪರಿಸ್ಥಿತಿಯಲ್ಲಿ ಬದಲಾವಣೆ ಕಾಣದ ಹಿನ್ನೆಲೆಯಲ್ಲಿ, ತಲೆ ಬೋಳಿಸಿಕೊಳ್ಳುವ ಮೂಲಕ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ವಿಷಯ ದೇಶಾದ್ಯಂತ ಚರ್ಚೆಗೆ ಕಾರಣವಾಗಿದೆ.
ಕೀರ್ತನಾ ಮೆನನ್ ಅವರ ನಿರ್ಧಾರ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. “My Life, My Choice” ಹಲವಾರು ಬೆಂಬಲ ವ್ಯಕ್ತಪಡಿಸಿದ್ದಾರೆ. ವೈಯಕ್ತಿಕ ಜೀವನದ ನಿರ್ಧಾರಗಳಲ್ಲಿ ಕುಟುಂಬದ ಒತ್ತಡ ಇರಬಾರದು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಮತ್ತೊಂದೆಡೆ, ಸಮಸ್ಯೆಗೆ ಇದು ಪರಿಹಾರವಲ್ಲ ಎಂದು ಕೆಲವರು ಟೀಕಿಸಿದ್ದಾರೆ.






