Views: 55
ಕನ್ನಡ ಕರಾವಳಿ ಸುದ್ದಿ: ಮುಂಗಾರು ಅಧಿವೇಶನಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟದಲ್ಲಿ ಮೇಜರ್ ಸರ್ಜರಿ ನಡೆಯುವ ಸಾಧ್ಯತೆ ದಟ್ಟವಾಗಿದ್ದು, ಈ ಮಹತ್ವದ ಪುನಾರಚನೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಉಪಪ್ರಧಾನಿ ಹುದ್ದೆ ಒಲಿಯುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.
ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮತ್ತು ಮಹಾರಾಷ್ಟ್ರದಲ್ಲಿ ಆಪರೇಷನ್ ಟೈಗರ್ ಯಶಸ್ವಿಗೊಳಿಸಿದ ನಾಯಕರಿಗೆ ದೊಡ್ಡ ಬಹುಮಾನ ನೀಡಲು ಹೈಕಮಾಂಡ್ ಸಜ್ಜಾಗಿದೆ ಎನ್ನಲಾಗಿದೆ.
ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ಬಣಕ್ಕೆ ಶಾಕ್ ನೀಡಿ, 6 ಸಂಸದರನ್ನು ಎನ್‌ಡಿಎ ಮೈತ್ರಿಕೂಟಕ್ಕೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದ ಆಪರೇಷನ್ ಟೈಗರ್ ರೂವಾರಿಗಳಿಗೆ ಕೇಂದ್ರ ಸಂಪುಟದಲ್ಲಿ ಸ್ಥಾನ ಸಿಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.
ಕಲ್ಯಾಣ್ ಕ್ಷೇತ್ರದ ಸಂಸದ ಹಾಗೂ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಪುತ್ರ ಶ್ರೀಕಾಂತ್ ಶಿಂಧೆ ಈ ಇಡೀ ಆಪರೇಷನ್‌ನ ಮಾಸ್ಟರ್‌ಮೈಂಡ್ ಆಗಿದ್ದರು. ಇವರೊಂದಿಗೆ ಓಂರಾಜೆ ನಿಂಬಾಳ್ಕರ್ ಮತ್ತು ಸಂಜಯ್ ಬಾಂದು ಜಾಧವ್ಗೂ ಸಂಪುಟದಲ್ಲಿ ಸ್ಥಾನ ನೀಡುವ ಮೂಲಕ ಶಿಂಧೆ ಬಣಕ್ಕೆ ದೊಡ್ಡ ಮಾನ್ಯತೆ ನೀಡಲು ಬಿಜೆಪಿ ಮುಂದಾಗಿದೆ ಎಂದು ವರದಿಯಾಗಿದೆ.
ಆಪರೇಷನ್ ಟೈಗರ್ ಯೋಜನೆ ಕೇವಲ ಮಹಾರಾಷ್ಟ್ರ ಸರ್ಕಾರದ ಇಬ್ಬರು ಸಚಿವರು ಸೇರಿದಂತೆ ಕೆಲವೇ ಕೆಲವು ನಾಯಕರಿಗೆ ಮಾತ್ರ ಗೊತ್ತಿತ್ತು ಎಂದು ತಿಳಿದುಬಂದಿದ್ದು, ಜೂನ್ 16 ರಂದು ಅತ್ಯಂತ ರಹಸ್ಯವಾಗಿ ಸಂಸದರನ್ನು ಖಾಸಗಿ ವಿಮಾನದ ಮೂಲಕ ದೆಹಲಿಗೆ ಕರೆತರಲಾಗಿತ್ತು. ನೋಯ್ಡಾದ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದ ಬಂಡಾಯ ಸಂಸದರು, ಮರುದಿನವೇ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿ ಮಾಡಿ ತಾವೇ ಅಸಲಿ ಶಿವಸೇನೆ ಎಂದು ಪತ್ರ ನೀಡಿದ್ದರು. ಈ ಇಡೀ ಕಾರ್ಯಾಚರಣೆಯನ್ನು ಶ್ರೀಕಾಂತ್ ಶಿಂಧೆ ಮುಂಚೂಣಿಯಲ್ಲಿ ನಿಂತು ಯಶಸ್ವಿಗೊಳಿಸಿದ್ದರು ಎನ್ನಲಾಗಿದೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಈ ಬಾರಿ ಇನ್ನು ಹೆಚ್ಚಿನ ಜವಾಬ್ದಾರಿಗಳನ್ನು ನೀಡುವ ಸಾಧ್ಯತೆ ಇದ್ದು, ಇದರೊಂದಿಗೆ ಮುಂಗಾರು ಅಧಿವೇಶನಕ್ಕೂ ಮುನ್ನ ದೇಶದ ಅತ್ಯಂತ ಪ್ರಮುಖ ಖಾತೆಗಳಾದ ರೈಲ್ವೆ ಮತ್ತು ಹಣಕಾಸು ಸಚಿವಾಲಯದ ನಾಯಕತ್ವದಲ್ಲೂ ಮಹತ್ವದ ಬದಲಾವಣೆಗಳಾಗಲಿವೆ ಎಂದು ಮೂಲಗಳು ತಿಳಿಸಿವೆ. ಈ ಇಡೀ ಬೆಳವಣಿಗೆಗಳ ಬೆನ್ನಲ್ಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರು ದೆಹಲಿಯಲ್ಲಿ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ.
ಇತ್ತೀಚೆಗಷ್ಟೇ ಆಮ್ ಆದ್ಮಿ ಪಕ್ಷವನ್ನು ತೊರೆದು ಕೇಸರಿ ಪಾಳಯ ಸೇರಿದ್ದ ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾಗೂ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಸಿಗುವ ಸಾಧ್ಯತೆಯಿದೆ. ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ರಾಘವ್ ಚಡ್ಡಾ ಬಿಜೆಪಿಯ ಪ್ರಮುಖ ಮುಖವಾಗಲಿದ್ದಾರೆ. ಹೀಗಾಗಿ, ಪಂಜಾಬ್‌ನಲ್ಲಿ ಪಕ್ಷವನ್ನು ಬಲಪಡಿಸಲು ಅವರಿಗೆ ಸಚಿವ ಸ್ಥಾನದ ಗಿಫ್ಟ್ ನೀಡಲು ಹೈಕಮಾಂಡ್ ತೀರ್ಮಾನಿಸಿದೆ ಎನ್ನಲಾಗಿದೆ.






