ಪ್ರೀತಿಸಿ ಮದುವೆಯಾಗಿದ್ದವಳನ್ನು ರಹಸ್ಯವಾಗಿಟ್ಟಿದ್ದಕ್ಕೆ ನವವಿವಾಹಿತೆ ಆತ್ಮಹತ್ಯೆ
Views: 31
ಕನ್ನಡ ಕರಾವಳಿ ಸುದ್ದಿ: ಪ್ರೀತಿಸಿ ಮದುವೆಯಾಗಿ ನವವಿವಾಹಿತೆಯನ್ನು ಪತಿ ರಹಸ್ಯವಾಗಿಟ್ಟಿದ್ದಕ್ಕೆ ಮನನೊಂದು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೆಲಮಂಗಲದ ಬಸವನಹಳ್ಳಿಯಲ್ಲಿ ನಡೆದಿದೆ.
ಗೌರಿಬಿದನೂರಿನ ಬೀರಮ್ಮನಹಳ್ಳಿ ಮೂಲದ ತನುಜಾ (31) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಯಲಹಂಕದ ಮಾಯಸಂದ್ರ ನಿವಾಸಿಯಾದ ರವೀಂದ್ರ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದರು ಎನ್ನಲಾಗಿದೆ.
ರವೀಂದ್ರ ಹಾಗೂ ತನುಜಾ ಇಬ್ಬರೂ ಕೆಲಸಕ್ಕೆ ಹೋಗುವಾಗ ಪರಿಚಯವಾಗಿದ್ದರು. ದಿನಗಳೆದಂತೆ ಈ ಪರಿಚಯ ಪ್ರೀತಿಗೆ ತಿರುಗಿತ್ತು. ಇಬ್ಬರೂ ಪರಸ್ಪರ ಇಷ್ಟಪಟ್ಟು ಇತ್ತೀಚೆಗಷ್ಟೇ ಧರ್ಮಸ್ಥಳದಲ್ಲಿ ಮದುವೆಯಾಗಿದ್ದರು. ಮದುವೆಯ ನಂತರ, ಸ್ವಲ್ಪ ಸಮಯ ಕಳೆಯಲಿ, ಆಮೇಲೆ ನಮ್ಮ ಮನೆಯಲ್ಲಿ ವಿಷಯ ತಿಳಿಸುತ್ತೇನೆ ಎಂದು ಹೇಳಿದ್ದ ರವೀಂದ್ರ, ತನುಜಾಳನ್ನು ಯಲಹಂಕದ ಸಿಂಗಾಪುರದ ಬಾಡಿಗೆ ಮನೆಯೊಂದರಲ್ಲಿ ಇರಿಸಿದ್ದ.
ತನುಜಾ ತನ್ನ ಪತಿ ರವೀಂದ್ರನಿಗೆ ಫೋನ್ ಮಾಡಿ, ಮನೆಗೆ ಬರುವಂತೆ ಕರೆದಿದ್ದಳು. ಆದರೆ ರವೀಂದ್ರ, ಈಗ ಬರಲು ಸಾಧ್ಯವಿಲ್ಲ, ನಾಳೆ ಬೆಳಗ್ಗೆ ಬರುತ್ತೇನೆ ಎಂದು ಹೇಳಿದ್ದ. ಇದರಿಂದ ಸಿಟ್ಟಿಗೆದ್ದ ತನುಜಾ ಮೊಬೈಲ್ ಫೋನ್ ಅನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದಳು. ಬಳಿಕ ರಾತ್ರಿ 10 ಗಂಟೆ ಸುಮಾರಿಗೆ ರವೀಂದ್ರನಿಗೆ, ನಾನು ನೆಲಮಂಗಲದ ಬಸವನಹಳ್ಳಿಯಲ್ಲಿ ಕುಳಿತು ವಿಷ ಕುಡಿದಿದ್ದೇನೆ ಎಂದು ಮೆಸೇಜ್ ಕಳುಹಿಸಿದ್ದಳು. ಇದರಿಂದ ಗಾಬರಿಗೊಂಡ ರವೀಂದ್ರ ತಕ್ಷಣವೇ ಬಸವನಹಳ್ಳಿಗೆ ಬಂದಿದ್ದ. ಸ್ಥಳದಲ್ಲಿ ತನುಜಾ ಬಿದ್ದಿರುವುದನ್ನು ಕಂಡು, ತಕ್ಷಣವೇ ಆಕೆಯನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದ. ಆದರೆ ಅಷ್ಟರಲ್ಲಾಗಲೇ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದರು.
ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.






