ಶಿಕ್ಷಣ

ಕೋಟ ಕಾರಂತ ಥೀಮ್ ಪಾರ್ಕ್ ನಲ್ಲಿ ಗುರುಕುಲ ಪದವಿ ಪೂರ್ವ ಕಾಲೇಜಿನ ಕಾವ್ಯ ಕಥಾ ಕಮ್ಮಟ ಕಾರ್ಯಗಾರ

Views: 86

ಕನ್ನಡ ಕರಾವಳಿ ಸುದ್ದಿ: ಕೋಟದ ಕಾರಂತ ಥೀಮ್ ಪಾರ್ಕ್ ನಲ್ಲಿ ಗುರುಕುಲ ಪದವಿ ಪೂರ್ವ ಕಾಲೇಜು ಹಾಗೂ ಕಾರಂತ ಪ್ರತಿಷ್ಠಾನ ( ರಿ) ಕೋಟಾ ಇದರ ಸಹಯೋಗದಲ್ಲಿ ಒಂದು ದಿನದ ಕಾವ್ಯ- ಕಥಾ ಕಮ್ಮಟವನ್ನು ಹಮ್ಮಿಕೊಳ್ಳಲಾಗಿತ್ತು.

ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಭಿರುಚಿಯನ್ನು ಹೆಚ್ಚಿಸುವ ಉದ್ದೇಶದಿಂದ ಆಯೋಜಿಸಲಾದ ಈ ಕಮ್ಮಟವನ್ನು ಬಾಂಡ್ಯಾ ಎಜುಕೇಶನಲ್ ಟ್ರಸ್ಟ್ ನ ಜಂಟಿ ಕಾರ್ಯನಿರ್ವಾಹಕರಾದ ಶ್ರೀಮತಿ ಅನುಪಮಾ ಎಸ್ ಶೆಟ್ಟಿ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ – ನಾವು ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕಾದರೆ ಸಮಾಜಮುಖಿಯಾಗಿ ಚಿಂತನೆ ನಡೆಸಿದ ಹಿರಿಯರ ಮಾರ್ಗದರ್ಶನ ಅಗತ್ಯ. ಸಾಹಿತ್ಯ ನಮ್ಮ ಬದುಕಿನೊಂದಿಗೆ ಬೆಸೆದುಕೊಂಡು ಉದಾತ್ತ ಸಂಸ್ಕೃತಿಯ ಪ್ರತೀಕವಾಗಿ ನಮ್ಮೊಂದಿಗಿದೆ. ಭಾಷೆ ಮತ್ತು ಸಂಸ್ಕೃತಿ ನಮ್ಮ ಬದುಕಿನ ಉಸಿರಾಗಿರಬೇಕು. ಸಾಹಿತಿಗಳ ಜೀವನ ದರ್ಶನ ನಮಗೆ ಪಾಠವಾಗಿ ಉತ್ತಮ ಕಾಣ್ಕಿಯನ್ನು ಸಮಾಜಕ್ಕೆ ನೀಡಬೇಕು ಎಂದರು.

ಸಂಪನ್ಮೂಲ ವ್ಯಕ್ತಿ ಕೋಟ ವಿವೇಕ ಬಾಲಕಿಯರ ಪ್ರೌಢ ಶಾಲಾ ಪದವೀಧರ ಶಿಕ್ಷಕ,ರಾಜ್ಯ ಪ್ರಶಸ್ತಿ ವಿಜೇತ ಶ್ರೀ ನರೇಂದ್ರ ಕುಮಾರ್ ಕೋಟ ಇವರು ಕಾವ್ಯ ಕಮ್ಮಟವನ್ನು ಉದ್ದೇಶಿಸಿ ಮಾತನಾಡುತ್ತಾ – ಕನಸು ಕಾಣುವ ಮನಸ್ಸಿನಲ್ಲಿ ಕಾವ್ಯವೂ ಹುದುಗಿದೆ. ಕಾವ್ಯದಲ್ಲಿ ಮಾದುರ್ಯ ಇಂಪಿನ ಜೊತೆಗೆ ಸಮಾಜವನ್ನು ವಿಶ್ಲೇಷಿಸುವ ಗುಣ ಇದೆ. ಕವಿತೆ ಹುಟ್ಟಬೇಕಾದರೆ ಅಂತ:ಕರಣದಲ್ಲಿ ಭಾವಗಳು ಪಡಿ ಮೂಡಬೇಕು. ಒಂದು ಕವಿತೆಗೆ ಹೊಳೆಯುವ ಅರ್ಥ ಮತ್ತು ತಿಳಿಯುವ ಅರ್ಥವಿರುತ್ತದೆ. ಅನುಭವವೇ ಬದುಕಿನ ದೊಡ್ಡ ಶಿಕ್ಷಕ ಎಂದರು. ವಿದ್ಯಾರ್ಥಿಗಳಿಗೆ ಕವಿತೆ ಬರೆಯುವ ತರಬೇತಿಯನ್ನು ನೀಡಿ, ವಿದ್ಯಾರ್ಥಿಗಳ ಕವಿತೆಗಳನ್ನು ವಿಶ್ಲೇಷಿಸಿದರು.

ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಆಳ್ವಾಸ್ ಕಾಲೇಜಿನ ಪ್ರೊ. ಹರೀಶ್ ಟಿ ಜಿ ಯವರು ಕಥಾ ಕಮ್ಮಟದಲ್ಲಿ ಮಾತನಾಡಿ – ಸಮಾಜದಲ್ಲಿ ನಾವು ಒಂಟಿ ಎನ್ನುವ ಭಾವದೊಂದಿಗೆ ಹೆಜ್ಜೆ ಹಾಕುತ್ತಿದ್ದೇವೆ. ಮನಸ್ಸಿನೊಳಗೆ ಭಾವಗಳು ಸ್ಪುರಣಗೊಂಡು ಘಟನೆಗಳೊಂದಿಗೆ ಹಿತವಾಗಿ ಜೋಡಣೆಗೊಂಡಾಗ ಒಂದು ಸುಂದರ ಕಥೆ ಮೂಡುತ್ತದೆ. ಕಥೆ ಎನ್ನುವುದು ಭಾಷೆಯ ಮೂಲಕ ಕಟ್ಟುವ ಅದ್ಭುತ ಕಲೆಗಾರಿಕೆ. ಓದುವ ಮತ್ತು ಬರೆಯುವ ಹವ್ಯಾಸ ಇಂದಿನ ವಿದ್ಯಾರ್ಥಿಗಳಲ್ಲಿ ಮರೆಯಾಗುತ್ತಿರುವ ಸಂದರ್ಭದಲ್ಲಿ ಇಂತಹ ಕಮ್ಮಟಗಳಿಂದ ಸಾಹಿತ್ಯಾಭಿರುಚಿ ಉಳಿಯಲು ಸಾಧ್ಯ ಎಂದರು.

ಗುರುಕುಲ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸಂದೀಪ್ ನಾಯ್ಕ್ ರವರು ಮಾತಾಡಿ – ವಿದ್ಯಾರ್ಥಿ ಸ್ನೇಹಿಯಾದ ಇಂತಹ ಕಾರ್ಯಕ್ರಮಗಳಲ್ಲಿವಿದ್ಯಾರ್ಥಿ ಹೆಚ್ಚು ಆಸಕ್ತಿಯಿಂದ ತಮ್ಮನ್ನು ತೊಡಗಿಸಿಕೊಳ್ಳಬೇಕು.ಕನ್ನಡ ನುಡಿ – ಭಾಷೆಯ ಅರಿವಿನೊಂದಿಗೆ ಸಾಹಿತ್ಯದಲ್ಲಿ ಅಡಗಿದ ಅಗಾಧ ಜೀವನ ಮೌಲ್ಯಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದರು.

ಕು.ಅಧಿತಿ ಪಟೇಲ್ ಕಾರ್ಯಕ್ರಮ ನಿರ್ವಹಿಸಿದರು. ಗುರುಕುಲ ಸಾಹಿತ್ಯ – ಸಾಂಸ್ಕೃತಿಕ ವೇದಿಕೆಯ ಸಂಯೋಜಕರಾದ ಡಾ.ಕೃಷ್ಣರಾಜ ಕರಬ ರವರು ಪ್ರಾಸ್ತಾವಿಕವಾಗಿ ಮಾತಾನಾಡಿ ಸರ್ವರನ್ನು ಸ್ವಾಗತಿಸಿದರು.ಉಪನ್ಯಾಸಕ ವೃಂದ ಉಪಸ್ಥಿತರಿದ್ದರು. ಕು.ಸಾನ್ಯ ಹಾಗೂ ಕು.ತೇಜಸ್ವಿನಿ ಕೆ ಅತಿಥಿಗಳನ್ನು ಪರಿಚಯಿಸಿದರು. ಕು.ಪೂಜಾ ವಂದಿಸಿದರು.

Related Articles

Back to top button
error: Content is protected !!