ಅನೈತಿಕ ಸಂಬಂಧಕ್ಕೆ ಅಡ್ಡಿ: ಗಂಡನನ್ನು ಕೊಂದಿದ್ದ ಪತ್ನಿ, ಪ್ರಿಯಕರನಿಗೆ ಜೀವಾವಧಿ ಶಿಕ್ಷೆ
Views: 74
ಕನ್ನಡ ಕರಾವಳಿ ಸುದ್ದಿ: ಪ್ರಿಯಕರನೊಂದಿಗೆ ಸೇರಿಕೊಂಡು ಊಟದಲ್ಲಿ ನಿದ್ರೆ ಮಾತ್ರೆ ಬೆರೆಸಿ, ನಂತರ ಉಸಿರುಗಟ್ಟಿಸಿ, ಹಲ್ಲಯಗೈದು ಪತಿಯನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಇಬ್ಬರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟವಾಗಿದೆ.
ಪತಿ ಸತೀಶ್ ಎಂಬವರನ್ನು ಹತ್ಯೆ ಮಾಡಿದ್ದ ಪತ್ನಿ ಕಲ್ಪನಾ ಹಾಗೂ ಪ್ರಿಯಕರ ಜಾವೇದ್ ಪಾಷಾಗೆ ನಗರದ 67ನೇ ಸಿಸಿಹೆಚ್ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ಅಲ್ಲದೆ 25 ಸಾವಿರ ದಂಡ ವಿಧಿಸಲಾಗಿದ್ದು, ಅದನ್ನು ಪಾವತಿಸಲು ವಿಫಲರಾದರೆ ಒಂದು ವರ್ಷ ಸಾದಾ ಶಿಕ್ಷೆ ವಿಧಿಸುವಂತೆ ಕೋರ್ಟ್ ಆದೇಶಿಸಿದೆ.
2017ರಲ್ಲಿ ಮೃತ ಸತೀಶ್ನ ಕೊಲೆ ನಡೆದಿತ್ತು. ಪ್ರಕರಣ ದಾಖಲಿಸಿಕೊಂಡ ಯಶವಂತಪುರ ಠಾಣೆಯ ಅಂದಿನ ಇನ್ಸ್ಪೆೆಕ್ಟರ್ ವೈ.ಮುದ್ದುರಾಜ್, ಇಬ್ಬರನ್ನು ಬಂಧಿಸಿ ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಸಿದ್ದರು. ವಿಚಾರಣೆ ವೇಳೆ ಆರೋಪಿಗಳು ಕೃತ್ಯ ಎಸಗಿರುವುದು ಸಾಬೀತಾಗಿದ್ದರಿಂದ ನ್ಯಾ.ಎ.ಜಯಪ್ರಕಾಶ್ ಅವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದ್ದಾರೆ.
ಪ್ರಕರಣದ ಹಿನ್ನೆಲೆ: ಯಶವಂತಪುರದ ಕೆ.ಎನ್.ಬಡಾವಣೆಯ ಮನೆಯೊಂದರಲ್ಲಿ ಸತೀಶ್ ಹಾಗೂ ಪತ್ನಿ ಕಲ್ಪನಾ ವಾಸವಾಗಿದ್ದರು. ಪತಿಗೆ ತಿಳಿಯದಂತೆ ಪತ್ನಿಯು ಜಾವೀದ್ ಪಾಷಾನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು. 2017ರ ಏಪ್ರಿಲ್ 18ರಂದು ಗಂಡನನ್ನು ತೊರೆದು ಪ್ರಿಯಕರನೊಂದಿಗೆ ಓಡಿ ಹೋಗಿದ್ದಳು. ಇದನ್ನು ಅರಿಯದ ಸತೀಶ್, ತನ್ನ ಪತ್ನಿ ನಾಪತ್ತೆಯಾಗಿರುವುದಾಗಿ ದೂರು ಪೊಲೀಸರಿಗೆ ನೀಡಿದ್ದರು.
ತಮ್ಮಿಬ್ಬರ ಸಂಬಂಧಕ್ಕೆ ಗಂಡನೇ ಅಡ್ಡಿಯಾಗಿದ್ದಾನೆ ಎಂದು ಭಾವಿಸಿ ಆತನ ಹತ್ಯೆಗೆ ಇಬ್ಬರೂ ಸಂಚು ಹೂಡಿದ್ದರು. ಇದರಂತೆ ಕೆಲ ದಿನಗಳ ಬಳಿಕ ಮನೆಗೆ ಬಂದ ಕಲ್ಪನಾ, ಮೇ 22ರ ರಾತ್ರಿ ನಿದ್ರೆ ಮಾತ್ರೆಗಳನ್ನು ಪುಡಿ ಮಾಡಿ ಊಟದಲ್ಲಿ ಬೆರೆಸಿದ್ದಳು. ಊಟ ಮಾಡಿದ ನಂತರ ಗಂಡ ನಿದ್ರೆಗೆ ಜಾರಿದ ಬಳಿಕ ಪ್ರಿಯಕರನನ್ನು ಮನೆಗೆ ಕರೆಯಿಸಿಕೊಂಡಿದ್ದಳು. ಚೂಡಿದಾರ್ ಪ್ಯಾಂಟಿನಿಂದ ಸತೀಶ್ ಕುತ್ತಿಗೆಯನ್ನು ಪತ್ನಿ ಬಿಗಿಯಾಗಿ ಹಿಡಿದುಕೊಂಡರೆ, ಸತೀಶ್ ಕಿರುಚಾಡದಂತೆ ಬಾಯಿಗೆ ಬಟ್ಟೆ ತುರುಕಿ ಮನೆಯಲ್ಲಿದ್ದ ಸಣ್ಣ ಕಲ್ಲಿನಿಂದ ಪ್ರಿಯಕರ ಹೊಡೆದು ಸಾಯಿಸಿದ್ದರು.
ಕೃತ್ಯವೆಸಗಿದ ಬಳಿಕ ಪತಿಯು ವಿಷ ಸೇವಿಸಿ ಸಾವನ್ನಪ್ಪಿರುವುದಾಗಿ ಮನೆಯವರಿಗೆ ನಂಬಿಸಿದ್ದಳು. ತನ್ನ ಮೇಲೆ ಅನುಮಾನ ಬಾರದಿರಲು ಕೃತ್ಯಕ್ಕೆ ಬಳಸಿದ್ದ ಸಿಮ್ ಮುರಿದು ಬಿಸಾಕಿ ಕಲ್ಪನಾ ಸಾಕ್ಷ್ಯನಾಶ ಮಾಡಿದ್ದಳು. ನ್ಯಾಯಾಲಯದ ವಿಚಾರಣೆ ವೇಳೆ ಸಾಕ್ಷಿದಾರರ ಹೇಳಿಕೆ, ತಾಂತ್ರಿಕ ಸುಳಿವು ಹಾಗೂ ವೈದ್ಯಕೀಯ ವರದಿಯು ಅಪರಾಧಿಗಳಿಗೆ ಮಗ್ಗುಲ ಮುಳ್ಳಾಗಿತ್ತು. ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕ ಕೆ.ವಿ.ಅಶ್ವಥನಾರಾಯಣ ಅವರು ವಾದ ಮಂಡಿಸಿದ್ದರು.






