ಭಾರೀ ಮಳೆ, ಕೇರಳದ ವಯನಾಡು ಭೂ ಕುಸಿತ: ಐವರ ದುರ್ಮರಣ, ಹಲವರು ಅವಶೇಷಗಳಡಿ ಸಿಲುಕಿರುವ ಶಂಕೆ!
Views: 34
ಕನ್ನಡ ಕರಾವಳಿ ಸುದ್ದಿ: ಕೇರಳದ ವಯನಾಡು ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಮಂಗಳವಾರ ಭೀಕರ ಭೂಕುಸಿತ ಸಂಭವಿಸಿದೆ.
ಕಲ್ಲಾಡಿ ಮೀನಾಕ್ಷಿ ಸೇತುವೆ ಸಮೀಪದ ಅನಕ್ಕಂಪೊಯಿಲ್-ಮೆಪ್ಪಾಡಿ ಸುರಂಗ ರಸ್ತೆ ಯೋಜನೆ ಪ್ರದೇಶದಲ್ಲಿ ಈ ದುರ್ಘಟನೆ ನಡೆದಿದೆ. ಘಟನೆ ನಡೆದ ವೇಳೆ ಹಲವು ನಿರ್ಮಾಣ ಕಾರ್ಮಿಕರು ಸ್ಥಳದಲ್ಲೇ ಕೆಲಸ ಮಾಡುತ್ತಿದ್ದರು. ಗುಡ್ಡದ ದೊಡ್ಡ ಭಾಗವೊಂದು ಏಕಾಏಕಿ ಕುಸಿದು ವಾಹನಗಳು ಹಾಗೂ ನಿರ್ಮಾಣ ಪ್ರದೇಶವನ್ನು ಮಣ್ಣಿನಡಿ ಮುಚ್ಚಿಹಾಕಿದ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ದುರಂತದಲ್ಲಿ ಐವರು ಮೃತಪಟ್ಟಿರುವುದನ್ನು ಅಧಿಕಾರಿಗಳು ದೃಢಪಡಿಸಿದ್ದಾರೆ. ಇನ್ನೂ ಹಲವರು ಮಣ್ಣಿನಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ಬಳಿಕ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF), ಕೇರಳ ಅಗ್ನಿಶಾಮಕ ಮತ್ತು ರಕ್ಷಣಾ ಇಲಾಖೆ, ಪೊಲೀಸರು ಹಾಗೂ ಸ್ಥಳೀಯ ಸ್ವಯಂಸೇವಕರು ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ನಿರಂತರ ಮಳೆ ಹಾಗೂ ಗುಡ್ಡ ಪ್ರದೇಶದ ಅಸ್ಥಿರ ಪರಿಸ್ಥಿತಿ ಕಾರ್ಯಾಚರಣೆಗೆ ಅಡ್ಡಿಯಾಗಿದ್ದರೂ, ಸಿಲುಕಿರುವವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಉತ್ತರ ಕೇರಳದಲ್ಲಿ ಕಳೆದ ಹಲವು ಗಂಟೆಗಳಿಂದ ಸುರಿದ ಧಾರಾಕಾರ ಮಳೆಯೇ ಭೂಕುಸಿತಕ್ಕೆ ಪ್ರಮುಖ ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರತೀಯ ಹವಾಮಾನ ಇಲಾಖೆ (IMD) ವಯನಾಡು ಮತ್ತು ಕೋಳಿಕೋಡ್ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಿದ್ದು, ಅತ್ಯಧಿಕ ಮಳೆ ಹಾಗೂ ಮತ್ತಷ್ಟು ಭೂಕುಸಿತ ಸಂಭವಿಸುವ ಸಾಧ್ಯತೆ ಬಗ್ಗೆ ಎಚ್ಚರಿಕೆ ನೀಡಿದೆ. ಮಲಪ್ಪುರಂ, ಕಣ್ಣೂರು ಹಾಗೂ ಕಾಸರಗೋಡು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಜಾರಿಯಲ್ಲಿದೆ.
ಈ ಭೂಕುಸಿತ ಅನಕ್ಕಂಪೊಯಿಲ್-ಮೆಪ್ಪಾಡಿ ಸುರಂಗ ರಸ್ತೆ ಯೋಜನೆ ಕಾಮಗಾರಿ ನಡೆಯುತ್ತಿರುವ ಪ್ರದೇಶದಲ್ಲಿ ಸಂಭವಿಸಿದೆ. ನಿರಂತರ ಮಳೆ, ಗುಡ್ಡದ ಅಸ್ಥಿರತೆ ಅಥವಾ ಕಾಮಗಾರಿ ಸಂಬಂಧಿತ ಕಾರಣಗಳು ದುರಂತಕ್ಕೆ ಕಾರಣವಾಗಿವೆಯೇ ಎಂಬ ಕುರಿತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಅವಶೇಷಗಳಡಿ ಸಿಲುಕಿರುವವರನ್ನು ಹೊರತೆಗೆದಲು ಭಾರೀ ಯಂತ್ರೋಪಕರಣಗಳು ಹಾಗೂ ಮಾನವಶಕ್ತಿಯನ್ನು ಬಳಸಲಾಗುತ್ತಿದೆ. ಮಳೆ ನಿರಂತರವಾಗಿ ಸುರಿಯುತ್ತಿರುವುದರಿಂದ ಕಾರ್ಯಾಚರಣೆಗೆ ಅಡಚಣೆಯಾಗುತ್ತಿದ್ದು, ಭೂಕುಸಿತ ಸಂಭವಿಸುವ ಪ್ರದೇಶಗಳಿಗೆ ಸಾರ್ವಜನಿಕರು ತೆರಳದಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.






