ಇತರೆ

ಕುಂದಾಪುರ: ತ್ರಾಸಿ ಬೀಚ್ ಸಮೀಪ ಭೀಕರ ಅಪಘಾತ, ಬೈಕ್ ಸವಾರರಿಬ್ಬರು ಸಾವು

Views: 367

ಕನ್ನಡ ಕರಾವಳಿ ಸುದ್ದಿ: ರಾಷ್ಟ್ರೀಯ ಹೆದ್ದಾರಿ-66ರ ತ್ರಾಸಿ ಬೀಚ್ ಸಮೀಪದ ಅರಮ ದೇವಸ್ಥಾನದ ಎದುರು ಸೋಮವಾರ ಮಧ್ಯಾಹ್ನ ಸಂಭವಿಸಿದ ಭೀಕರ ಮುಖಾಮುಖಿ ಅಪಘಾತದಲ್ಲಿ ಓರ್ವ ಯುವಕ ಚಿಕಿತ್ಸೆ ಫಲಕಾರಿಯಾಗದೆ ಬೈಕ್ ಸವಾರರಿಬ್ಬರು ಮೃತಪಟ್ಟಿದ್ದು, ಮತ್ತೊಂದು ಬೈಕ್‌ನಲ್ಲಿದ್ದ ಯುವತಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ನಡೆದಿದೆ.

ಮೃತರನ್ನು ಭಟ್ಕಳ ತಾಲೂಕಿನ ಸಣ್ಣಬಾವಿ ಸಾತುಮನೆ ನಿವಾಸಿ ನಾಗಪ್ಪ ನಾಯ್ಕ ಅವರ ಪುತ್ರ ದೀಪಕ್ ನಾಗಪ್ಪ ನಾಯ್ಕ (23) ಮತ್ತು ಪಡುಕೋಣೆ ಹಡವು ನಿವಾಸಿಗಳಾದ ಪ್ಯಾಟ್ರಿಕ್ ವಾಝ್ (63) ಎಂದು ಗುರುತಿಸಲಾಗಿದೆ. ಗಾಯಾಳು ಪ್ಯಾಟ್ರಿಕ್ ವಾಝ್ ವರ ಪುತ್ರಿ ಪ್ಲೆನ್ಸಿಟಾ (24) ಎಂದು ಗುರುತಿಸಲಾಗಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಪ್ಯಾಟ್ರಿಕ್ ವಾಝ್ ಅವರು ತಮ್ಮಪುತ್ರಿಯನ್ನು ಬೈಕ್‌ನಲ್ಲಿ ಕರೆದುಕೊಂಡು ಬರುತ್ತಿದ್ದ ವೇಳೆ ಎದುರಿನಿಂದ ಬಂದ ದೀಪಕ್ ಚಲಾಯಿಸುತ್ತಿದ್ದ ಬೈಕ್‌ಗೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ತೀವ್ರತೆಯಿಂದ ಮೂವರೂ ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ದೀಪಕ್ ನಾಗಪ್ಪ ನಾಯ್ಕ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.

ಗಂಭೀರವಾಗಿ ಗಾಯಗೊಂಡಿರುವ ಪ್ಯಾಟ್ರಿಕ್ ವಾಝ್ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ. ಪುತ್ರಿ ಪ್ಲೆನ್ಸಿಟಾ ಕುಂದಾಪುರದ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಪಘಾತದ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕಾಗಮಿಸಿದ ಟೀಮ್ ಎಂಎಚ್‌ಐ ಗಂಗೊಳ್ಳಿ ತುರ್ತು ಸ್ಪಂದನಾ ತಂಡದ ಆಂಬುಲೆನ್ಸ್ ಚಾಲಕ ಇಬ್ರಾಹಿಂ ಗಂಗೊಳ್ಳಿ ಮತ್ತು ಅವರ ತಂಡ ಗಾಯಾಳುಗಳನ್ನು ತ್ವರಿತವಾಗಿ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದಿದ್ದಾರೆ. ಅಲ್ಲದೆ, ಮೃತ ಯುವಕನ ವಿಳಾಸ ಪತ್ತೆಹಚ್ಚಿ ಅವರ ಕುಟುಂಬದವರಿಗೆ ಮಾಹಿತಿ ನೀಡಿ ಅಗತ್ಯ ನೆರವು ಒದಗಿಸಿದ್ದಾರೆ.

ಈ ಸಂಬಂಧ ಗಂಗೊಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತದ ನಿಖರ ಕಾರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Related Articles

Back to top button
error: Content is protected !!