ಕೊಲ್ಲೂರು ಮೂಕಾಂಬಿಕೆಯ ದರ್ಶನಕ್ಕೆ ಬಂದಿದ್ದ ಭಕ್ತೆಯ ಹಣ ಕಳ್ಳತನ: ಮೂವರು ಆರೋಪಿಗಳು ಅರೆಸ್ಟ್
Views: 116
ಕನ್ನಡ ಕರಾವಳಿ ಸುದ್ದಿ: ಕೊಲ್ಲೂರು ಶ್ರೀ ಮೂಕಾಂಬಿಕೆಯ ದರ್ಶನಕ್ಕೆ ಬಂದಿದ್ದ ಭಕ್ತೆಯೊಬ್ಬರ ಹಣ ಕಳ್ಳತನ ಪ್ರಕರಣವನ್ನು ಕೇವಲ 24 ಗಂಟೆಯೊಳಗೆ ಕೊಲ್ಲೂರು ಪೊಲೀಸರು ಭೇದಿಸಿ, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದ ನೇತ್ರಾವತಿ, ಶಾರದಾ ಹಾಗೂ ದುರ್ಗಮ್ಮ ಬಂಧಿತ ಆರೋಪಿಗಳು. ದೇವಸ್ಥಾನಕ್ಕೆ ದರ್ಶನಕ್ಕೆ ಬಂದಿದ್ದ ನಿಮಿಶಾ ಎಂಬ ಭಕ್ತೆಯ ವ್ಯಾನಿಟಿ ಬ್ಯಾಗ್‌ನಲ್ಲಿದ್ದ 80 ಸಾವಿರ ರೂ. ಹಣ ಕಳ್ಳತನವಾಗಿತ್ತು. ಘಟನೆ ಬಳಿಕ ದೇವಸ್ಥಾನದ ಆವರಣದಲ್ಲಿ ಎಷ್ಟೇ ಹುಡುಕಾಟ ನಡೆಸಿದರೂ ಹಣ ಪತ್ತೆಯಾಗಿರಲಿಲ್ಲ.
ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ದೇವಸ್ಥಾನದ ಸಿಸಿ ಕ್ಯಾಮೆರಾ ದೃಶ್ಯಾವಳಿ ಹಾಗೂ ಘಟನೆ ನಡೆದ ಸ್ಥಳದಲ್ಲಿ ಸಾರ್ವಜನಿಕರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದ ಛಾಯಾಚಿತ್ರಗಳ ಆಧಾರದ ಮೇಲೆ ತನಿಖೆ ನಡೆಸಿದರು.
ತನಿಖೆಯಲ್ಲಿ ಕಳ್ಳತನ ಕೃತ್ಯದಲ್ಲಿ ಭಾಗಿಯಾಗಿದ್ದ ಮೂವರು ಮಹಿಳೆಯರ ಸುಳಿವು ಪತ್ತೆಯಾಗಿತ್ತು. ಕಳ್ಳತನ ನಡೆದ 24 ಗಂಟೆಯೊಳಗೆ ಅವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.






