ಇತರೆ

ಸಂಜೀವಿನಿ ಒಕ್ಕೂಟಕ್ಕೆ 23 ಲಕ್ಷ ರೂ. ವಂಚನೆ ಪ್ರಕರಣ: ದಂಪತಿ ಬಂಧನ

Views: 110

ಕನ್ನಡ ಕರಾವಳಿ ಸುದ್ದಿ: ಪೆರ್ಡೂರು ಪದ್ಮ ಕಮಲ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದಲ್ಲಿ ಲಕ್ಷಾಂತರ ರೂ. ಹಣವನ್ನು ವಂಚನೆ ಎಸಗಿದ ಪ್ರಕರಣಕ್ಕೆ ಸಂಬಂಧಿಸಿ ದಂಪತಿಯನ್ನು ಹಿರಿಯಡ್ಕ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಸುಗಂಧಿ ಹಾಗೂ ಆಕೆಯ ಪತಿ ಸಂತೋಷ ಎಂದು ಗುರುತಿಸಲಾಗಿದೆ.

ಪದ್ಮಕಮಲ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದಲ್ಲಿ ಮುಖ್ಯ ಪುಸ್ತಕ ಬರಹಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸುಗಂಧಿ, 2023ರಿಂದ 2025ರವರೆಗೆ ಸಾಲದ ಮರು ಪಾವತಿ ಹಣವನ್ನು ರಿಜಿಸ್ಟಾರ್‌ನಲ್ಲಿ ನಮೂದಿಸಿ ಒಕ್ಕೂಟದ ಬ್ಯಾಂಕ್ ಖಾತೆಗೆ ಜಮೆ ಮಾಡಲಿಲ್ಲ.

ಆಕೆ ವಿವಿಧ ಸಂಘಗಳ ಹೆಸರಿನಲ್ಲಿ ಒಕ್ಕೂಟದ ಚೆಕ್‌ಗೆ ಅಧ್ಯಕ್ಷರು ಮತ್ತು ಕಾರ್ಯದರ್ಶಿ ಅವರ ನಕಲಿ ಸಹಿ ಮಾಡಿ ಬ್ಯಾಂಕ್‌ನಿಂದ ಹಣವನ್ನು ದುರ್ಬಳಕೆ ಮಾಡಿದ್ದು, ಲೆಕ್ಕಪರಿಶೋಧನೆಗೆ ಬೇರೆ ಸದಸ್ಯರಿಗೆ ತೋರಿಸಲು ಬೇರೆ ಸಾಲದ ಖಾತೆ ಪುಸ್ತಕಗಳನ್ನು ನಿರ್ವಹಣೆ ಮಾಡಿ ಒಕ್ಕೂಟದ ಕಾರ್ಯಕಾರಿ ಸಮಿತಿಗೂ ಅನುಮಾನ ಬಾರದ ರೀತಿಯಲ್ಲಿ ಬೇರೆ ಬೇರೆ ಪಸ್ತಕ ನಿರ್ವಹಣೆ ಮಾಡಿದ್ದಾಳೆ ಎಂದು ದೂರಲಾಗಿದೆ.

ಹೀಗೆ ಸುಗಂಧಿ ಮತ್ತು ಆಕೆಯ ಗಂಡ ಸಂತೋಷ ಒಕ್ಕೂಟದ ಒಟ್ಟು 23,00,000 ರೂ. ಹಣವನ್ನು ತಮ್ಮ ಸ್ವಂತಕ್ಕೆ ಬಳಸಿಕೊಂಡು ವಂಚನೆ ಮಾಡಿರುವುದಾಗಿ ದೂರಲಾಗಿದೆ. ಅದರಂತೆ ಹಿರಿಯಡಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಉಡುಪಿ ಡಿವೈಎಸ್ಪಿ ಬೆಳ್ಳಿಯಪ್ಪ ಕೆ.ಯು. ನಿರ್ದೆಶನದಂತೆ, ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕ ಗೋಪೀಕೃಷ್ಣ ಮಾರ್ಗದರ್ಶನದಲ್ಲಿ ಹಿರಿಯಡ್ಕ ಎಸ್ಸೈಗಳಾದ ಪುನೀತ್ ಕುಮಾರ್ ಮತ್ತು ವಿಠ್ಠಲ ಮಲವಡಕರ ಹಾಗೂ ಸಿಬ್ಬಂದಿ ಕಾರ್ತಿಕ್ ತನಿಖೆ ನಡೆಸಿ, ಆರೋಪಿಗಳನ್ನು ಜು.6ರಂದು ವಶಕ್ಕೆ ಪಡೆದು ಠಾಣೆಯಲ್ಲಿ ಬಂಧಿಸಿ, ವಿಚಾರಣೆಗೆ ಒಳಪಡಿಸಿದರು.

ಮೇಲ್ನೋಟಕ್ಕೆ ಸುಗಂಧಿ ಹಾಗೂ ಆಕೆಯ ಗಂಡ ಸಂತೋಷ ಸೇರಿಕೊಂಡು ಸಂಘದಲ್ಲಿ ವಿವಿಧ ಸದಸ್ಯರ ಹೆಸರಲ್ಲಿ ನಕಲಿ ಸಹಿ ಹಾಗೂ ದಾಖಲೆ ಸೃಷ್ಟಿಸಿರುವುದು ಕಂಡು ಬಂದಿದೆ. ಪ್ರಕರಣ ತನಿಖೆ ಮುಂದುವರೆದಿದೆ ಎಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.

Related Articles

Back to top button
error: Content is protected !!