ಬಿಜೆಪಿಯಲ್ಲಿ ಮತ್ತೆ ನಾಯಕತ್ವ ಬದಲಾವಣೆ ಚರ್ಚೆ ಮುನ್ನೆಲೆಗೆ, ಆಡಿಯೋ ವೈರಲ್..! ಬಿಎಸ್‌ವೈ ಬಣ ಆಕ್ರೋಶ
Views: 50
ಕನ್ನಡ ಕರಾವಳಿ ಸುದ್ದಿ: ಸದಾನಂದ ಗೌಡರದ್ದು ‘ಕಿಕ್ ಔಟ್’ ಆಡಿಯೋ ಕಿಚ್ಚು ಹಚ್ಚಿರುವ ನಡುವೆಯೇ ನಾಯಕರಿಬ್ಬರ ಆರೋಪ-ಪ್ರತ್ಯಾರೋಪ ಗಳು ಪಕ್ಷಕ್ಕೆ ದೊಡ್ಡ ಮುಜುಗರ ತಂದಿವೆ.
ಕರ್ನಾಟಕ ಬಿಜೆಪಿಯಲ್ಲಿ ಮತ್ತೆ ನಾಯಕತ್ವ ಬದಲಾವಣೆ ಚರ್ಚೆ ಮುನ್ನೆಲೆಗೆ ಬಂದಿದ್ದು, ಇದಕ್ಕೆ ಪೂರಕವೆಂಬಂತೆ ರಾಜ್ಯಾಧ್ಯಕ್ಷ ಸ್ಥಾನದಿಂದ ಬಿ.ವೈ.ವಿಜಯೇಂದ್ರರನ್ನು ಕೆಳಗಿಳಿಸಲು ದೆಹಲಿ ನಾಯಕರಲ್ಲಿ ಒತ್ತಾಯ ಮಾಡಿರುವ ಮಾಜಿ ಸಿಎಂ ಡಿ.ವಿ.ಸದಾನಂದ ಗೌಡರದ್ದು ಎನ್ನಲಾದ ಆಡಿಯೋ ವೈರಲ್ ಆಗಿದೆ. ಬಿಜೆಪಿ ದೆಹಲಿ ಮಟ್ಟದ ನಾಯಕ ಪ್ರದೀಪ್ ಎಂಬುವವರ ಜತೆಗೆ ಇಂಗ್ಲಿಷ್ ಭಾಷೆಯಲ್ಲಿ ನಡೆಸಿದ ಸಂಭಾಷಣೆ ಇದಾಗಿದ್ದು, ಇದರಲ್ಲಿ ಮೂರು ತಿಂಗಳ ಬಳಿಕ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಅವರನ್ನು ಕೆಳಗಿಳಿಸಿ ಎಂದು ಇದರಲ್ಲಿ ಬೇಡಿಕೆ ಇಡಲಾಗಿದೆ. ಈ ಆಡಿಯೋ ಇದೀಗ ಕಮಲ ಪಾಳಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದು, ಮತ್ತೆ ಬಣ ಬಡಿದಾಟ ಶುರುವಾಗಿದೆ.
ಆಡಿಯೊದಲ್ಲೇನಿದೆ?
ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್‌ವರೆಗೂ ವಿಜಯೇಂದ್ರ ಮುಂದುವರೆಯಲು ಬಿಡಿ. ಬಳಿಕ ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆದು ಹಾಕಿ ಎಂಬುವುದು ಆಡಿಯೋದಲ್ಲಿ ಉಲ್ಲೇಖವಾಗಿದೆ. ಈಗಲೇ ತೆಗೆದು ಹಾಕಿದರೆ ಬಿಜೆಪಿ ಮತ್ತೆ ಲಿಂಗಾಯತ ವಿರೋಧಿ ಅಂತ ಟೀಕೆಗೆ ಗುರಿ ಆಗುವ ಅಪಾಯ ಇದೆ. ಇದು ಪಕ್ಷಕ್ಕೆ ಡ್ಯಾಮೇಜ್ ಆಗಬಹುದು. ಹಾಗಾಗಿ ಮುಂದಿನ ಅಕ್ಟೋಬರ್‌ವರೆಗೂ ಕಾದು ವಿಜಯೇಂದ್ರ ಅವರನ್ನು ಪದವಿಯಿಂದ ತೆಗೆಯುವಂತೆ ಮನವಿ ಮಾಡಲಾಗಿದೆ. ಬಿ.ವೈ.ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗಿ ಮೂರು ವರ್ಷ ಪೂರ್ಣಗೊಳಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಗೊಂದಲ ಮಾಡಿಕೊಳ್ಳುವುದು ಯಾಕೆ? ಎರಡು ತಿಂಗಳ ಒಳಗಾಗಿ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕಾಗಿದೆ. ಎರಡು ತಿಂಗಳಲ್ಲಿ ಅವರ ಅವಧಿ ಕೂಡಾ ಮುಕ್ತಾಯವಾಗುತ್ತಿದೆ.
ಇಂತಹ ಸಂದರ್ಭದಲ್ಲಿ ಯಾರೂ ಇದನ್ನು ಪ್ರಶ್ನೆ ಮಾಡುವುದಿಲ್ಲ. ಪಕ್ಷದಲ್ಲಿ ಮುಂದುವರಿಯಬೇಕೆಂದು ಯಾವುದೇ ಷರತ್ತು ಇಲ್ಲ.ಅಕ್ಟೋಬರ್‌ನಲ್ಲಿ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ. ಈ ಕೆಲಸ ಮಾಡಿದರೆ, ಲಿಂಗಾಯತರು ಸ್ವಲ್ಪ ವಿರೋಧ ಮಾಡಬಹುದು. ಆದರೆ ಯೋಗ್ಯರನ್ನು ನಾವು ರಾಜ್ಯಾಧ್ಯಕ್ಷರನ್ನಾಗಿ ಮಾಡಿದರೆ ಎಲ್ಲಾ ವಿರೋಧಗಳು ತಣ್ಣಗಾಗಲಿದೆ. ಇದು ನನ್ನ ಅಭಿಪ್ರಾಯವಾಗಿದೆ ಎಂದು ಪ್ರದೀಪ್ ಎಂಬುವವರ ಜೊತೆ ಇಂಗ್ಲಿಷ್ ಭಾಷೆಯಲ್ಲಿ ನಡೆಸಿದ ಸಂಭಾಷಣೆ ಇದಾಗಿದೆ.
ಬಿಎಸ್‌ವೈ ಬಣ ಆಕ್ರೋಶ
ವಿಜಯೇಂದ್ರರನ್ನು ಅಧ್ಯಕ್ಷ ಸ್ಥಾನದಿಂದ ಕಿತ್ತು ಬಿಸಾಕಿ ಅನ್ನೋ ಆಡಿಯೊ ವೈರಲ್ ಆಗುತ್ತಿದ್ದಂತೆ ಬಿಎಸ್‌ವೈ ಬಣದ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾವಣಗೆರೆಯಲ್ಲಿ ಈ ಬಗ್ಗೆ ಮಾತನಾಡಿರುವ ಮಾಜಿ ಶಾಸಕ ಎಂ.ಪಿ. ರೇಣುಕಾ ಚಾರ್ಯ, ಯಡಿಯೂರಪ್ಪನವರ ಅಶೀರ್ವಾದದಿಂದ ಕೆಲವರು ಸಿಎಂ ಆಗಿದ್ದಾರೆ. ಸಚಿವರು ಆಗಿದ್ದಾರೆ. ಏನಾದರೂ ಪಿತೂರಿ ನಡೆಸಿದರೆ ನಾವು ಸುಮ್ಮನೆ ಕೂರುವುದಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷರಾಗಿ 2 ವರ್ಷ ಪೂರೈಸಿದ್ದಾರೆ. ಪಕ್ಷ ಸಂಘಟನೆ ಯಲ್ಲಿ ವಿಜಯೇಂದ್ರ ಉತ್ತಮ ಕೆಲಸ ಮಾಡಿದ್ದಾರೆ. ರಾಜ್ಯ ದಲ್ಲಿ ಅನೇಕ ಹೋರಾಟ ಮಾಡಿದ್ದಾರೆ ಎಂದರು.






