ಸೌದಿ ಅರೇಬಿಯಾದಲ್ಲಿ ಹೆಲಿಕಾಪ್ಟರ್ ಪತನ:14 ಮಂದಿ ದುರ್ಮರಣ
Views: 54
ಕನ್ನಡ ಕರಾವಳಿ ಸುದ್ದಿ: ಸೌದಿ ಅರಾಮ್ಕೊ ತೈಲ ಕಂಪನಿಗೆ ಸೇರಿದ ಹೆಲಿಕಾಪ್ಟರ್ ರಾಸ್ ತನುರಾ ನಗರದಲ್ಲಿ ಪತನಗೊಂಡ ಪರಿಣಾಮ ಅದರಲ್ಲಿದ್ದ ಎಲ್ಲಾ 14 ಮಂದಿ ಮೃತಪಟ್ಟಿರುವ ದುರ್ಘಟನೆ ಭಾನುವಾರ ಸಂಭವಿಸಿದೆ. ಮೃತಪಟ್ಟವರೆಲ್ಲರೂ ಸೌದಿ ಅರೇಬಿಯಾದ ಪ್ರಜೆಗಳಾಗಿದ್ದು, ಈ ಘಟನೆ ದೇಶದ ತೈಲ ಮತ್ತು ಇಂಧನ ವಲಯದಲ್ಲಿ ತೀವ್ರ ಆಘಾತ ಮೂಡಿಸಿದೆ.
ಸೌದಿ ಪ್ರೆಸ್ ಏಜೆನ್ಸಿ (SPA) ವರದಿ ಪ್ರಕಾರ, ಭಾನುವಾರ ಬೆಳಿಗ್ಗೆ ಸುಮಾರು 6 ಗಂಟೆ ವೇಳೆಗೆ ಸೌದಿ ಅರಾಮ್ಕೊ ನಿರ್ವಹಿಸುತ್ತಿದ್ದ ಹೆಲಿಕಾಪ್ಟರ್ ರಾಸ್ ತನುರಾ ಪ್ರದೇಶದಲ್ಲಿ ಅಪಘಾತಕ್ಕೀಡಾಗಿದೆ. ಹೆಲಿಕಾಪ್ಟರ್ ಪತನಗೊಂಡ ತಕ್ಷಣ ರಕ್ಷಣಾ ತಂಡಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ಆರಂಭಿಸಿದರು. ಆದರೆ ಅಪಘಾತದ ತೀವ್ರತೆಯಿಂದಾಗಿ ವಿಮಾನದಲ್ಲಿದ್ದ ಎಲ್ಲ 14 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
ಅಪಘಾತಕ್ಕೆ ನಿಖರ ಕಾರಣವೇನು ಎಂಬುವುದು ಇನ್ನೂ ತಿಳಿದುಬಂದಿಲ್ಲ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಸಮಗ್ರ ತನಿಖೆಗೆ ಆದೇಶಿಸಿದ್ದು, ತಾಂತ್ರಿಕ ದೋಷ, ಹವಾಮಾನ ವೈಪರೀತ್ಯ ಅಥವಾ ಇತರೆ ಕಾರಣಗಳ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ.






