ಇತರೆ

ಒಂದೂವರೆ ವರ್ಷದ ಹಸುಗೂಸಿನೊಂದಿಗೆ 4 ತಿಂಗಳ ಗರ್ಭಿಣಿ ಆತ್ಮಹತ್ಯೆ 

Views: 27

ಕನ್ನಡ ಕರಾವಳಿ ಸುದ್ದಿ: ಒಂದೂವರೆ ವರ್ಷದ ಹಸುಗೂಸಿನೊಂದಿಗೆ ನಾಲ್ಕು ತಿಂಗಳ ಗರ್ಭಿಣಿಯೊಬ್ಬರು ತೆರೆದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಚಿಂಚನಸೂರ್ ಗ್ರಾಮದಲ್ಲಿ ನಡೆದಿದೆ.

ಅಂಬಿಕಾ (25) ಹಾಗೂ ಆಕೆಯ ಒಂದೂವರೆ ವರ್ಷದ ಮುದ್ದಾದ ಪುತ್ರ ಆರಾಧ್ಯ ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಮೃತ ಮಹಿಳೆ ಅಂಬಿಕಾಗೆ ಮೂರು ವರ್ಷಗಳ ಹಿಂದೆಯಷ್ಟೇ ವೀರಭದ್ರಪ್ಪ ಎಂಬುವವರ ಜೊತೆ ವಿವಾಹವಾಗಿತ್ತು. ದಂಪತಿಗೆ ಒಂದೂವರೆ ವರ್ಷದ ಗಂಡು ಮಗನಿದ್ದನು. ಇದರ ಬೆನ್ನಲ್ಲೇ ಅಂಬಿಕಾ ಈಗ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದರು ಎಂದು ತಿಳಿದುಬಂದಿದೆ.

ಅಂಬಿಕಾ ಕಳೆದ ಮಂಗಳವಾರ ಬೆಳಗ್ಗೆಯೇ ಯಾರಿಗೂ ಹೇಳದೆ ದಿಢೀರನೆ ಮನೆಯಿಂದ ಹೊರಟು ಹೋಗಿದ್ದರು. ಮಹಿಳೆ ಎಷ್ಟು ಹೊತ್ತಾದರೂ ಮನೆಗೆ ಮರಳದಿದ್ದಾಗ ಆತಂಕಗೊಂಡ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಸುತ್ತಮುತ್ತಲಿನ ಎಲ್ಲ ಪ್ರದೇಶಗಳಲ್ಲೂ ತೀವ್ರ ಹುಡುಕಾಟ ನಡೆಸಿದ್ದರು.

ಎರಡು ದಿನಗಳ ಸತತ ಹುಡುಕಾಟದ ಬಳಿಕ, ಗ್ರಾಮದ ಹೊರವಲಯದಲ್ಲಿದ್ದ ತೆರೆದ ಬಾವಿಯೊಂದರ ಪಕ್ಕದಲ್ಲಿ ಅಂಬಿಕಾ ಅವರ ಚಪ್ಪಲಿಗಳು ಪತ್ತೆಯಾಗಿವೆ. ಇದರಿಂದ ಅನುಮಾನಗೊಂಡ ಗ್ರಾಮಸ್ಥರು ಬಾವಿಯೊಳಗೆ ಇಳಿದು ಶೋಧ ನಡೆಸಿದಾಗ ತಾಯಿ ಮತ್ತು ಮಗುವಿನ ಮೃತದೇಹಗಳು ತೇಲುತ್ತಿರುವುದು ಕಂಡುಬಂದಿದೆ.

ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ನರೋಣಾ ಠಾಣೆಯ ಪೊಲೀಸರು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರ ನೆರವಿನೊಂದಿಗೆ ಬಾವಿಯಲ್ಲಿದ್ದ ಎರಡು ಶವಗಳನ್ನು ಹೊರತೆಗೆದು, ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ನಾಲ್ಕು ಜೀವಗಳು ಹೀಗೆ ಬಾವಿಯಲ್ಲಿ ಹೆಣವಾಗಿ ಬಿದ್ದಿರುವುದನ್ನು ಕಂಡು ಇಡೀ ಚಿಂಚನಸೂರ್ ಗ್ರಾಮ ಕಣ್ಣೀರಲ್ಲಿ ಮುಳುಗಿದೆ.

ಅಂಬಿಕಾ ಅವರ ಈ ಆತ್ಮಹತ್ಯೆಗೆ ನಿಖರವಾದ ಕಾರಣವೇನೆಂಬುದು ಇನ್ನು ಸ್ಪಷ್ಟವಾಗಿಲ್ಲ. ಈ ಭೀಕರ ದುರಂತದ ಕುರಿತು ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Related Articles

Back to top button
error: Content is protected !!