ಮಹಿಳೆ ಉಗ್ರ ನಂಟಿನ ರಹಸ್ಯ ಬಯಲು.. ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳಿಂದ ತೀವ್ರ ವಿಚಾರಣೆ
Views: 68
ಕನ್ನಡ ಕರಾವಳಿ ಸುದ್ದಿ: ಪಾಕಿಸ್ತಾನದ ಭಯೋತ್ಪಾದಕ ಗುಂಪು ಜೈಶ್-ಎ-ಮೊಹಮ್ಮದ್ ಜೊತೆಗಿನ ರಾಜಸ್ಥಾನದ ಮಹಿಳೆ ನಂಟಿನ ಬಗ್ಗೆ ಇನ್ನಷ್ಟು ಆತಂಕಕಾರಿ ವಿಷಯಗಳು ಬೆಳಕಿಗೆ ಬಂದಿವೆ.
ಸದ್ಯ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ರಾಜಸ್ಥಾನದ ಬಬಿತಾ ಧಾಕರ್ ಅಲಿಯಾಸ್ ’ಖದೀಜಾ’ ಎಂಬಾಕೆಯನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಇನ್ನು ವಿಚಾರಣೆ ವೇಳೆ ಮೂಲತಃ ಸವಾಯಿ ಮಾಧೋಪುರ ಜಿಲ್ಲೆಯವಳಾದ ಬಬಿತಾ, ಜೈಪುರದ ವಾಟಿಕಾ ಪ್ರದೇಶದಲ್ಲಿ ತನ್ನ ತಂದೆಯೊಂದಿಗೆ ವಾಸಿಸುತ್ತಿದ್ದಳು. ಆದರೆ ಕಳೆದ ಕೆಲವು ವರ್ಷಗಳಿಂದ ಪತಿಯಿಂದ ದೂರವಿದ್ದ ಈಕೆ, ಸಾಮಾಜಿಕ ಜಾಲತಾಣಗಳ ಮೂಲಕ ಪಾಕಿಸ್ತಾನದ ಉಗ್ರರ ಸಂಪರ್ಕಕ್ಕೆ ಬಂದಿದ್ದಳು ಎಂದು ತಿಳಿದು ಬಂದಿದೆ.
ಇದಲ್ಲದೆ, ಬಂಧಿತ ಬಬಿತಾ ವಾಟ್ಸಾಪ್ ಸೇರಿದಂತೆ ಹಲವು ಸಾಮಾಜಿಕ ಮಾಧ್ಯಮ ಖಾತೆಗಳನ್ನು ಪಾಕಿಸ್ತಾನದಿಂದಲೇ ಆಪರೇಟ್ ಮಾಡಲಾಗುತ್ತಿತ್ತು. ಜೊತೆಗೆ ತನ್ನ ಸಿಮ್ ಕಾರ್ಡ್‌ಗಳ ರಹಸ್ಯ ಮಾಹಿತಿಯನ್ನು ಆಕೆ ಗಡಿಯಾಚೆಗಿನ ಹ್ಯಾಂಡ್ಲರ್‌ಗಳಿಗೆ ನೀಡಿದ್ದಳು ಎಂಬ ಆಘಾತಕಾರಿ ವಿಷಯ ಎಸ್ ಐಟಿ ತನಿಖೆಯಿಂದ ಬೆಳಕಿಗೆ ಬಂದಿದೆ.
ಇನ್ನು ಬಹಾವಲ್ಪುರ ಮೂಲದ ಹಲವು ಉಗ್ರರು ಈಕೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು. ಅವರಲ್ಲಿ ಒಬ್ಬಾತ ತಾನು ಜೈಶ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್‌ನ ಕುಟುಂಬದವನೆಂದು ಪರಿಚಯಿಸಿಕೊಂಡಿದ್ದ. ಆಕೆಗೆ ತೀವ್ರ ಧಾರ್ಮಿಕ ಮತ್ತು ಸೈದ್ಧಾಂತಿಕ ತರಬೇತಿ ನೀಡಿ, ಮತಾಂತರ ಹಾಗೂ ಸಿದ್ಧಾಂತ ಹೇರಿಕೆ ಮಾಡಲಾಗಿತ್ತು. ವಿಚಾರಣೆ ವೇಳೆ ಬಬಿತಾ, ತಾನು ಪಾಕಿಸ್ತಾನಿ ಮೌಲ್ವಿಯೊಬ್ಬನ ಪ್ರಭಾವಕ್ಕೆ ಒಳಗಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ಅಲ್ಲದೆ, ಆಕೆಯನ್ನು ಪಾಕಿಸ್ತಾನಕ್ಕೆ ಕರೆಸಿಕೊಳ್ಳಲು ಉಗ್ರರು ಸಂಚು ರೂಪಿಸಿದ್ದರೆನ್ನಲಾಗಿದೆ.
ಭಾರತದಲ್ಲಿ ಹೊಸದಾಗಿ ಉಗ್ರರನ್ನು ನೇಮಕಾತಿ ಮಾಡಲು ಮತ್ತು ಸ್ಲೀಪರ್ ಸೆಲ್ ನೆಟ್‌ವರ್ಕ್ ರಚಿಸಲು ಜೆಇಎಂ ಈಕೆಯನ್ನು ಬಳಸಿಕೊಳ್ಳುತ್ತಿತ್ತು .ಬಂಧಿತ ಮಹಿಳೆಯ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಕಠಿಣ ಮೊಕದ್ದಮೆ ದಾಖಲಿಸಲಾಗಿದೆ.
ಸದ್ಯ ನ್ಯಾಯಾಲಯವು ಆರೋಪಿಯನ್ನು ಜೂನ್ 27 ರವರೆಗೆ ಎಟಿಎಸ್ ವಶಕ್ಕೆ ಒಪ್ಪಿಸಿದ್ದು, ಆಕೆಯ ಡಿಜಿಟಲ್ ದಾಖಲೆಗಳು ಹಾಗೂ ಮೊಬೈಲ್ ಡೇಟಾವನ್ನು ಅಧಿಕಾರಿಗಳು ತೀವ್ರ ಪರಿಶೀಲನೆಗೆ ಒಳಪಡಿಸಿದ್ದಾರೆ.






