ತಂದೆ -ತಾಯಿ, ಸಹೋದರಿ ಹತ್ಯೆ ಪ್ರಕರಣ: ಯುವತಿಯ ಬಂಧನ, ಪರಾರಿಯಾಗಿದ್ದ ಪ್ರಿಯಕರನಿಗೆ ಶೋಧ
Views: 40
ಕನ್ನಡ ಕರಾವಳಿ ಸುದ್ದಿ: ಪ್ರಿಯಕರನೊಂದಿಗೆ ಸೇರಿ ತಂದೆ – ತಾಯಿ ಹಾಗೂ ಸಹೋದರಿಯನ್ನು ಹತ್ಯೆ ಮಾಡಿದ್ದ ಆರೋಪಿಯನ್ನು ಬೆಂಗಳೂರು ವೈಟ್‌ಫೀಲ್ಡ್ ವಿಭಾಗದ ಪೊಲೀಸರ ತಂಡ ಬಂಧಿಸಿದೆ.
ಕೃತ್ಯದ ಬಳಿಕ ಪರಾರಿಯಾಗಿದ್ದ ಶ್ವೇತಾ (25)ಳನ್ನು ಪುದುಚೇರಿ ರೈಲ್ವೇ ನಿಲ್ದಾಣದ ಬಳಿ ಬಂಧಿಸಲಾಗಿದೆ. ಆಕೆಯ ಪ್ರಿಯಕರ ಕೆನತ್ಗಾಗಿ ಹುಡುಕಾಟ ಮುಂದುವರೆದಿದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
ಚಾಕುವಿನಿಂದ ಇರಿದು ಸೋಮಸುಂದರ್ (52) ಅವರ ಪತ್ನಿ ಮತ್ತುಲಕ್ಷ್ಮಿ (48) ಹಾಗೂ ಕಿರಿಯ ಪುತ್ರಿ ಸುಪ್ರಿಯಾ (19) ಎಂಬವರನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಸೋಮವಾರ ರಾತ್ರಿ ಸೀಗೇಹಳ್ಳಿಯಲ್ಲಿರುವ ಡಾಮಿನಿಕ್ ಲೇಔಟ್‌ನ ಸಾಯಿ ಗ್ರೀನ್ ಹೋಮ್ಸ್ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿತ್ತು.
ಕೆನತ್ ಜೊತೆ ಎರಡು ತಿಂಗಳುಗಳಿಂದ ಹಿರಿಯ ಪುತ್ರಿ ಶ್ವೇತಾ ವಾಸಿಸುತ್ತಿದ್ದುದಕ್ಕೆ ಸೋಮಸುಂದರ್ ದಂಪತಿ ಆಕ್ಷೇಪ ವ್ಯಕ್ತಪಡಿಸಿದ್ದರು. ಮಗಳನ್ನು ಭೇಟಿಯಾಗಲು ಬಂದಿದ್ದ ಪೋಷಕರೊಂದಿಗೆ ಸೋಮವಾರ ಸಂಜೆ ಶ್ವೇತಾ ಜಗಳ ಮಾಡಿಕೊಂಡಿದ್ದಳು. ಅದೇ ಸಮಯದಲ್ಲಿ ಆರೋಪಿಗಳು ಚಾಕುವಿನಿಂದ ಇರಿದು ಮುತ್ತುಲಕ್ಷ್ಮಿ ಹಾಗೂ ಸುಪ್ರಿಯಾಳನ್ನು ಬರ್ಬರವಾಗಿ ಹತ್ಯೆ ಮಾಡಿದ್ದರು.
ಅದೇ ವೇಳೆ ತಪ್ಪಿಸಿಕೊಂಡು ಹೊರಬಂದಿದ್ದ ಸೋಮಸುಂದರ್ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರಾದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದರು. ಕೃತ್ಯ ಎಸಗಿದ ಬಳಿಕ ಆರೋಪಿಗಳಾದ ಕೆನತ್ ಹಾಗೂ ಶ್ವೇತಾ ಮನೆಯಿಂದ ಪರಾರಿಯಾಗಿದ್ದರು. ಬಳಿಕ ಮಾರ್ಗ ಮಧ್ಯೆ ಇಬ್ಬರೂ ಪ್ರತ್ಯೇಕವಾಗಿದ್ದರು. ಸದ್ಯ ಶ್ವೇತಾಳನ್ನು ಬಂಧಿಸಲಾಗಿದೆ.ಆಕೆಯ ಪ್ರಿಯಕರನಿಗಾಗಿ ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ.
.






