ಇತರೆ

2 ಕೋಟಿ ರೂ.ವಿಮೆ ಹಣಕ್ಕಾಗಿ ಪ್ರಿಯಕರ ಸೇರಿ ಗಂಡನನ್ನು ಕೊಂದ ಮಗಳು: ಕೃತ್ಯದಿಂದ ಬೇಸತ್ತ ತಾಯಿ ಆತ್ಮಹತ್ಯೆ 

Views: 161

ಕನ್ನಡ ಕರಾವಳಿ ಸುದ್ದಿ: 2 ಕೋಟಿ ರೂಪಾಯಿ ವಿಮೆ ಹಣಕ್ಕಾಗಿ ಮಾಜಿ ಸೈನಿಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೊಂದು ಆಘಾತಕಾರಿ ತಿರುವು ಸಿಕ್ಕಿದೆ. ಪ್ರಕರಣದ ಪ್ರಮುಖ ಆರೋಪಿ ಸುಮಾ ಮಂಜರಗಿ ಬಂಧನಕ್ಕೊಳಗಾಗುತ್ತಿದ್ದಂತೆ, ಅತ್ತ ಮಗಳ ಕೃತ್ಯದಿಂದ ಜರ್ಜರಿತರಾಗಿದ್ದ ಆಕೆಯ ತಾಯಿ ನೇಣಿಗೆ ಶರಣಾಗಿದ್ದಾರೆ.

ಮಾಜಿ ಸೈನಿಕ ಸಂದೀಪ್ ಮಂಜರಗಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾದ ಸುಮಾ ಮಂಜರಗಿ ತಾಯಿ ಮಹಾದೇವಿ ಬದಾಮಿ (57) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಗಳು ಸುಮಾ ಮತ್ತು ಆಕೆಯ ಪ್ರಿಯಕರ ಸೇರಿ ಅಳಿಯನನ್ನು ಭೀಕರವಾಗಿ ಕೊಂದ ವಿಷಯ ತಿಳಿಯುತ್ತಿದ್ದಂತೆ ತಾಯಿ ತೀವ್ರ ಆಘಾತಕ್ಕೊಳಗಾಗಿದ್ದರು. ಜೂನ್ 14ರಂದು ಮಗಳನ್ನು ಯಮಕನಮರಡಿ ಪೊಲೀಸರು ಬಂಧಿಸುತ್ತಿದ್ದಂತೆ ತಾಯಿ ಮಾನಸಿಕವಾಗಿ ಸಂಪೂರ್ಣ ಜರ್ಜರಿತರಾಗಿದ್ದರು ಎನ್ನಲಾಗಿದೆ.

ಮಗಳ ಈ ಪಾಪದ ಕೃತ್ಯದಿಂದ ಇಡೀ ಊರಿನಲ್ಲಿ ತಲೆ ಎತ್ತಿ ಓಡಾಡದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ತೀವ್ರ ಮನನೊಂದ ಮಹಾದೇವಿ ಅವರು ಇಂದು ಹುಕ್ಕೇರಿ ತಾಲೂಕಿನ ಘೋಡಗೇರಿ ಗ್ರಾಮದಲ್ಲಿರುವ ತಮ್ಮ ಮನೆಯ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಯೋಧ ಮೃತ ಪಟ್ಟಿದ್ದು ಹೇಗೆ?: ಕೆಲ ದಿನಗಳ ಹಿಂದೆ ಹುಕ್ಕೇರಿ ಜಾತ್ರೆಗೆ ಹೋಗಿ ಬರುವಾಗ ಸಂದೀಪ್‌ಗೆ ಅಪಘಾತವಾಗಿ ಆಸ್ಪತ್ರೆಗೆ ದಾಖಲಾಗಿದ್ದ. ಈ ವೇಳೆ ಸುಮಾ ನನಗೆ ಕರೆ ಮಾಡಿ, ಹುಳುಗಳಿಗೆ ಹೊಡೆಯುವ ವಿಷದ ಔಷಧಿ ತಂದುಕೊಡುವಂತೆ ಕೇಳಿದ್ದಳು. ನಾನು ಆಕೆಗೆ ಔಷಧಿ ತಂದುಕೊಟ್ಟ ಮಾರನೇ ದಿನವೇ ಸಂದೀಪ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಆ ಬಳಿಕ ಆಕೆ ಆ ಔಷಧಿಯ ಬಾಟಲಿ ಹಾಗೂ ಇನ್ನಿತರ ವಸ್ತುಗಳನ್ನು ಎಲ್ಲಾದರೂ ಎಸೆದು ಬಾ ಎಂದು ಕೊಟ್ಟಾಗ ನನಗೆ ಅನುಮಾನವಾಯಿತು. ಸೈನಿಕನ ಹೆಸರಲ್ಲಿ 2 ಕೋಟಿ ಇನ್ಶುರೆನ್ಸ್ ಮಾಡಿಸಿದ್ದೇನೆ. ಹಣ ಬಂದ ಕೂಡಲೇ ನಿನ್ನ ಮಕ್ಕಳು ಮತ್ತು ನನ್ನ ಮಕ್ಕಳು ಸೇರಿ ಬೆಳಗಾವಿಗೆ ಹೋಗಿ ವಾಸಿಸೋಣ ಅಂತ ಸುಮಾ ಪ್ಲಾನ್ ಮಾಡಿದ್ದಳು ಎಂದು ಪ್ರಿಯಕರ ಪುಂಡಲೀಕ ವಿಡಿಯೋದಲ್ಲಿ ಹೇಳಿದ್ದನು.

Related Articles

Back to top button
error: Content is protected !!