ಇತರೆ

ಗಂಡನನ್ನು ಬಿಟ್ಟು ಲಿವ್-ಇನ್ ಪಾರ್ಟ್ನರ್ ಜೊತೆಗೆ ಶಾಪಿಂಗ್ ಹೋದಾಗ ಐದೂವರೆ ವರ್ಷದ ಮಗು ಕೊಲೆ ಪ್ರಕರಣ: ತಾಯಿ ಬಂಧನ

Views: 81

ಕನ್ನಡ ಕರಾವಳಿ ಸುದ್ದಿ: ಐದೂವರೆ ವರ್ಷದ ಮಗು ಪಿ. ವೆನ್ನೆಲಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಕೆಲವು ದಿನಗಳಿಂದ ತಲೆಮರೆಸಿಕೊಂಡಿದ್ದ ತಾಯಿಯನ್ನು ಕಾಡುಗೋಡಿ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಹಾಸನ ಜಿಲ್ಲೆಯ ಸಕಲೇಶಪುರ ಬಳಿಯ ಫಾರ್ಮ್‌ಹೌಸ್ ಒಂದರಲ್ಲಿ ಅಡಗಿದ್ದ ಆರೋಪಿ ತಾಯಿ ಪ್ರಿಯಾಂಕಾಳನ್ನು ವಶಕ್ಕೆ ಪಡೆದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖೆಗಾಗಿ 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದಿದ್ದಾರೆ.

ದಾವಣಗೆರೆಯಲ್ಲಿ ಖಾಸಗಿ ಶಾಲೆಯ ಮಾಲೀಕರಾಗಿರುವ ಪ್ರಿಯಾಂಕಾ ಇತ್ತೀಚೆಗೆ ಅವರ ಪತಿಯಿಂದ ಬೇರ್ಪಟ್ಟಿದ್ದರು. ಈಕೆ ತನ್ನ ಲಿವ್-ಇನ್ ಪಾರ್ಟ್ನರ್ ಮೋಹನ್ ಜಿ. ಮಹಾಲಿಂಗಪ್ಪ(40) ಜತೆ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಳು. ಮಾರ್ಚ್ 24ರಂದು ಪ್ರಿಯಾಂಕಾ ಮಗುವನ್ನು ಮೋಹನ್ ಜತೆ ಕಾರಿನಲ್ಲಿ ಬಿಟ್ಟು ಶಾಪಿಂಗ್‌ಗೆ ಹೋಗಿದ್ದಳು.

ಆ ವೇಳೆ ಮಗು ಐಸ್‌ಕ್ರೀಮ್ ಕೇಳಿದ್ದು, ಮೋಹನ್ ತಂದ ಐಸ್ ಕ್ರೀಮ್ ಬೇಡವೆಂದು ಬೇರೆ ಪ್ಲೇವರ್ ತರುವಂತೆ ಹಠ ಹಿಡಿದಿದೆ. ಕೋಪಗೊಂಡ ಮೋಹನ್ ಮಗುವಿನ ಹೊಟ್ಟೆಗೆ ಬಲವಾಗಿ ಹೊಡೆದಿದ್ದಾನೆ. ಮಗು ನೋವು ತಾಳಲಾರದೆ ಜೋರಾಗಿ ಅತ್ತಾಗ ಆತ ಬಾಯಿ ಮತ್ತು ಮೂಗು ಮುಚ್ಚಿ ಉಸಿರುಗಟ್ಟಿಸಿ ಹತ್ಯೆಗೈದಿದ್ದಾನೆ.

ಘಟನೆಯನ್ನು ಮುಚ್ಚಿಡಲು ಪ್ರಿಯಾಂಕಾ ತನ್ನ ಕುಟುಂಬಕ್ಕೆ ಒಮ್ಮೆ ಮಗು ಊಟ ಮಾಡಿ ಮಲಗಿ ಮೃತಪಟ್ಟಿದೆ ಎಂದರೆ, ಇನ್ನೊಮ್ಮೆ ಕೋಲಾರದ ರೆಸ್ಟೋರೆಂಟ್ ಬಳಿ ಕಾರಿನಲ್ಲಿ ಎಸಿ ಆನ್ ಮಾಡಿ ಮಲಗಿಸಿದ್ದಾಗ ಸಾವನ್ನಪ್ಪಿದೆ ಎಂದು ನಂಬಿಸಲು ಯತ್ನಿಸಿದ್ದಳು. ಮಗುವಿನ ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿಸಿ ಸಾವು ಸಂಭವಿಸಿದೆ ಎಂದು ವರದಿ ಬಂದಿದ್ದರೂ ಕೂಡ ಪೋಲಿಸರು ಆರಂಭದಲ್ಲಿ ಯಾವುದೇ ರೀತಿಯ ಕ್ರಮ ಕೈಗೊಂಡಿರಲಿಲ್ಲ ಎಂದು ತಿಳಿದುಬಂದಿದೆ.

Related Articles

Back to top button
error: Content is protected !!