ಪತ್ನಿಗೆ ವಿಚ್ಛೇದನ ನೀಡಿ ಅತ್ತೆಯನ್ನೇ ಮದುವೆಯಾದ ಅಳಿಯ!
Views: 121
ಕನ್ನಡ ಕರಾವಳಿ ಸುದ್ದಿ:ಹೆಂಡತಿಯ ತಾಯಿ ಮೇಲೆಯೇ ಪ್ರೀತಿ ಹುಟ್ಟಿ ಪತ್ನಿಗೆ ವಿಚ್ಛೇದನ ನೀಡಿ ಅತ್ತೆಯನ್ನೇ ಅಳಿಯ ಮದುವೆಯಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿರುವ ಒಂದು ಘಟನೆ ಈಗ ಭಾರಿ ಚರ್ಚೆಗೆ ಕಾರಣವಾಗಿದೆ.
ಸದ್ಯ ಈ ವಿಲಕ್ಷಣ ಮದುವೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಅಳಿಯ ಮತ್ತು ಅತ್ತೆ ಪರಸ್ಪರ ಹಾರ ಬದಲಾಯಿಸಿಕೊಳ್ಳುವ ಫೋಟೋ ಎಲ್ಲೆಡೆ ಹರಿದಾಡುತ್ತಿದೆ.
ಕಾಲ್ಪುರದ ನಿವಾಸಿಯೊಬ್ಬರಿಗೆ ಕೆಲವು ವರ್ಷಗಳ ಹಿಂದೆ ವಿವಾಹವಾಗಿತ್ತು. ಮದುವೆಯಾದ ಆರಂಭದಲ್ಲಿ ದಂಪತಿಯ ನಡುವೆ ಎಲ್ಲವೂ ಸರಿಯಾಗಿಯೇ ಇತ್ತು. ಆದರೆ, ಕಾಲಕ್ರಮೇಣ ಪತ್ನಿಯ ತಾಯಿ ಈ ದಂಪತಿಗಳ ಮನೆಗೆ ಆಗಾಗ ಬಂದು ಉಳಿದುಕೊಳ್ಳಲು ಆರಂಭಿಸಿದ್ದರು. ಈ ಸಮಯದಲ್ಲಿ ಅಳಿಯ ಮತ್ತು ಅತ್ತೆಯ ನಡುವೆ ಪ್ರೀತಿ ಹುಟ್ಟಿದೆ ಎಂದು ತಿಳಿದು ಬಂದಿದೆ.
ಅತ್ತೆಯೊಂದಿಗಿನ ಸಂಬಂಧ ದಿನದಿಂದ ದಿನಕ್ಕೆ ಆಳವಾಗುತ್ತಿದ್ದಂತೆ, ಆ ವ್ಯಕ್ತಿ ತನ್ನ ಪತ್ನಿಯಿಂದ ದೂರವಾಗಲು ನಿರ್ಧರಿಸಿದ್ದ. ಕೌಟುಂಬಿಕ ಕಲಹ ಹಾಗೂ ಭಿನ್ನಾಭಿಪ್ರಾಯಗಳ ನೆಪವೊಡ್ಡಿ ಆತ ನ್ಯಾಯಾಲಯದ ಮೂಲಕ ತನ್ನ ಪತ್ನಿಗೆ ಕಾನೂನುಬದ್ಧವಾಗಿ ವಿಚ್ಛೇದನ ನೀಡಿದ್ದ. ವಿಚ್ಛೇದನ ಪ್ರಕ್ರಿಯೆ ಪೂರ್ಣಗೊಂಡ ಬೆನ್ನಲ್ಲೇ, ಆ ವ್ಯಕ್ತಿ ತನ್ನ ಪತ್ನಿಯ ತಾಯಿಯನ್ನು ಅಂದರೆ ತನ್ನ ಅತ್ತೆಯನ್ನು ಮದುವೆಯಾಗಲು ನಿರ್ಧರಿಸಿದ್ದು, ಇಬ್ಬರೂ ಒಮ್ಮತದಿಂದ ನ್ಯಾಯಾಲಯದಲ್ಲಿ ವಿವಾಹವಾಗಿದ್ದಾರೆ.
ಈ ಫೋಟೋ ಮತ್ತು ವಿಡಿಯೋ ವೈರಲ್ ಆಗಿದ್ದು, ಇವರಿಬ್ಬರ ಈ ವರ್ತನೆ ಕೌಟುಂಬಿಕ ಸಂಬಂಧಗಳ ವ್ಯಾಖ್ಯಾನಕ್ಕೆ ಮಸಿ ಬಳಿದಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ತನ್ನ ಸ್ವಂತ ಮಗಳ ಸಂಸಾರವನ್ನು ಹಾಳುಗೆಡವಿ ಒಬ್ಬ ತಾಯಿಗೆ ಏನು ಸಿಗಲು ಸಾಧ್ಯ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.






