ರಾಜಕೀಯ

ಇಂದು ಕಾಂಗ್ರೆಸ್ ಹೈವೋಲ್ಟೇಜ್ ಮೀಟಿಂಗ್..  ಗೊಂದಲಗಳಿಗೆ ಬೀಳಲಿದೆಯಾ ತೆರೆ?

Views: 15

ಕನ್ನಡ ಕರಾವಳಿ ಸುದ್ದಿ:ಕಳೆದ ಆರು ತಿಂಗಳುಗಳಿಂದ ಕರ್ನಾಟಕ ಕಾಂಗ್ರೆಸ್ ನಲ್ಲಿ ನಾಯಕತ್ವ ಬದಲಾವಣೆ, ಸಚಿವ ಸಂಪುಟ ಪುನಾರಚನೆಗೆ ಸಂಬಂಧಿಸಿದಂತೆ ನಡೆಯುತ್ತಿರುವ ‘ಹೈಡ್ರಾಮ’ಕ್ಕೆ ಇತಿಶ್ರೀ ಹಾಡಲು ಕೊನೆಗೂ ಹೈಕಮಾಂಡ್ ಮುಂದಾಗಿದೆ.

ಸಿಎಂ ಸಿದ್ದರಾಮಯ್ಯರಿಗೆ ದೆಹಲಿ ವರಿಷ್ಠರಿಂದ ಬಂದ ಬುಲಾವ್ ಇದೀಗ ರಾಜ್ಯ ರಾಜಕಾರಣದಲ್ಲಿ ಬಿರುಸಿನ‌ ಚಟುವಟಿಕೆಗಗಳಿಗೆ ಕಾರಣವಾಗಿದೆ. ಮತ್ತೆ ನಾಯಕತ್ವ ಬದಲಾವಣೆ ಮತ್ತು ಸಂಪುಟ ಪುನಾರಚನೆಯ ಚರ್ಚೆ ತೀವ್ರಗೊಂಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಸಂಜೆ 7 ಗಂಟೆಗೆ ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳಿದ್ದಾರೆ. ಸಿದ್ದರಾಮಯ್ಯ ಅವರೊಂದಿಗೆ ಆಪ್ತ ಸಚಿವರಾದ ಜಿ.ಪರಮೇಶ್ವರ, ಬೈರತಿ ಸುರೇಶ್, ಡಾ. ಎಚ್‌.ಸಿ.ಮಹದೇವಪ್ಪ, ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಕೆ.ಜೆ.ಜಾರ್ಜ್, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಪೊನ್ನಣ್ಣ ತೆರಳಿದ್ದಾರೆ. ಇದಕ್ಕೂ ಮೊದಲು ಸಚಿವ ಸಚಿವ ಸತೀಶ್ ಜಾರಕಿಹೊಳಿ 6 ಗಂಟೆಗೆ ಪ್ರತ್ಯೇಕವಾಗಿ ದೆಹಲಿಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.

ಈ ನಡುವೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಮ್ಮ ಸಹೋದರ ಡಿ.ಕೆ.ಸುರೇಶ್ ಅವರೊಂದಿಗೆ ಸಂಜೆ 6.40ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಪ್ರತ್ಯೇಕವಾಗಿ ದೆಹಲಿಗೆ ತೆರಳಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಗೊಂದಲಗಳಿಗೆ ಬೀಳಲಿದೆಯಾ ತೆರೆ?: ಸಿಎಂ ಸಿದ್ದರಾಮಯ್ಯ ದೆಹಲಿ ಭೇಟಿಯಿಂದ ರಾಜ್ಯ ರಾಜಕೀಯದಲ್ಲಿ‌ನ ಗೊಂದಲಕ್ಕೆ ತೆರೆ ಬೀಳಲಿದೆಯಾ ಎಂಬ ಕುತೂಹಲ ಮೂಡಿದೆ. ಹಿರಿಯ ಸಚಿವ ಕೆ.ಹೆಚ್. ಮುನಿಯಪ್ಪ ರಾಜ್ಯದಲ್ಲಿನ ಕಾಂಗ್ರೆಸ್ ಪವರ್ ಫೈಟ್ ಗೊಂದಲಕ್ಕೆ ಮೇ ಅಂತ್ಯಕ್ಕೆ ತೆರೆ ಎಳೆಯಲಿದೆ ಎಂದು ಹೇಳಿದ್ದರು. ಅದರಂತೆ ಇದೀಗ ಸಿಎಂ ಸಿದ್ದರಾಮಯ್ಯಗೆ ದೆಹಲಿಗೆ ಬುಲಾವ್ ನೀಡಿರುವುದು ರಾಜ್ಯದ ಪವರ್ ಫೈಟ್ ಗೊಂದಲಕ್ಕೆ ತೆರೆ ಬೀಳುವ ವಿಶ್ವಾಸ ಹಲವರದ್ದಾಗಿದೆ.

ಪ್ರಮುಖವಾಗಿ ಸಿಎಂ ದೆಹಲಿ ಭೇಟಿಯಿಂದ ನಾಯಕತ್ವ ಬದಲಾವಣೆಯಾಗುತ್ತಾ ಅಥವಾ ಸಂಪುಟ ಪುನಾರಚನೆಯಾಗುತ್ತಾ ಎಂಬ ಕುತೂಹಲವನ್ನು ಮೂಡಿಸಿದೆ. ನಾಯಕತ್ವ ಬದಲಾವಣೆಗೆ ಡಿಸಿಎಂ ಡಿಕೆಶಿ ಆಪ್ತರ ಬಣ ಕಸರತ್ತು ನಡೆಸುತ್ತಿದ್ದರೆ, ಸಂಪುಟ ಪುನಾರಚನೆಗೆ ಸಿಎಂ ಸಿದ್ದರಾಮಯ್ಯ ಬಣ ಒತ್ತಡ ತಂತ್ರ ಹೆಣೆಯುತ್ತಿದೆ. ದೆಹಲಿ ವರಿಷ್ಠರು ಇವೆರಡ ಪೈಕಿ ಯಾವುದಕ್ಕೆ ಮಣೆ ಹಾಕುತ್ತಾರೆ ಎಂಬುದೇ ರಾಜ್ಯ ಕಾಂಗ್ರೆಸ್ ಶಾಸಕರಲ್ಲಿನ ಕುತೂಹಲವಾಗಿದೆ.‌

ಇಂದು ಹೈವೋಲ್ಟೇಜ್ ಮೀಟಿಂಗ್: ಬೆಳಗ್ಗೆ 11 ಗಂಟೆಗೆ ದೆಹಲಿಯ ಎಐಸಿಸಿ ಕಚೇರಿಯಲ್ಲಿ ವರಿಷ್ಠರ ಸಭೆ ನಡೆಯಲಿದ್ದು, ಸಭೆಯಲ್ಲಿ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಕೆ.ಸಿ.ವೇಣುಗೋಪಾಲ್ ಹಾಗೂ ಸಿಎಂ ಸಿದ್ದರಾಮಯ್ಯ ಭಾಗಿಯಾಗಲಿದ್ದಾರೆ. ಈ ಸಭೆಯಲ್ಲಿ ಈ ಎಲ್ಲಾ ಗೊಂದಲಗಳಿಗೆ ತೆರೆ ಬೀಳಲಿದೆ ಎನ್ನಲಾಗಿದೆ. ಹಾಗಾಗಿ ಇಂದು ದೆಹಲಿಯಲ್ಲಿ ನಡೆಯಲಿರುವ ಹೈವೋಲ್ಟೇಜ್ ಮೀಟಿಂಗ್ ರಾಜ್ಯ ರಾಜಕಾರಣದಲ್ಲಿ ಸಂಚಲನಕ್ಕೆ ಕಾರಣವಾಗಿದೆ.

 

 

Related Articles

Back to top button
error: Content is protected !!