ಮುರುಡೇಶ್ವರದಲ್ಲಿ ಹಣದ ಆಮಿಷ ತೋರಿಸಿ ವೇಶ್ಯಾವಾಟಿಕೆ: ಇಬ್ಬರು ಮಹಿಳೆಯರನ್ನು ರಕ್ಷಿಸಿ, ಒಬ್ಬ ಆರೋಪಿ ಬಂಧನ
Views: 105
ಕನ್ನಡ ಕರಾವಳಿ ಸುದ್ದಿ: ವೇಶ್ಯಾವಾಟಿಕೆಯ ಖಚಿತ ಮಾಹಿತಿ ಮೇರೆಗೆ ಮುರುಡೇಶ್ವರದ ಶೆಟ್ಟರಕೇರಿ ರಸ್ತೆಯಲ್ಲಿರುವ ಭಾರತ ಗೆಸ್ಟ್ ಹೌಸ್‌ಗೆ ಮಧ್ಯರಾತ್ರಿ ದಾಳಿ ನಡೆಸಿದ ಪೊಲೀಸರು ಇಬ್ಬರು ನೊಂದ ಮಹಿಳೆಯರನ್ನು ರಕ್ಷಿಸಿ, ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ.
ಮುರುಡೇಶ್ವರ ವೃತ್ತದ ಸಿಪಿಐ ಜಗದೀಶ ಹಂಚನಾಳ ನೇತೃತ್ವದಲ್ಲಿ ಪಿಎಸ್‌ಐ ಹಣಮಂತ ಬಿರಾದಾರ ಪಿಎಸ್‌ಐ ಲೋಕನಾಥ ರಾಠೋಡ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಕಾರ್ಯಾಚರಣೆ ನಡೆಸಿದ್ದಾರೆ.
ದಾಳಿಯ ವೇಳೆ ಸಿಕ್ಕ ಸೊತ್ತುಗಳನ್ನು ಜಪ್ತಿಪಡಿಸಿದ ಪೊಲೀಸರು, ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ರಕ್ಷಿಸಲಾದ ಮಹಿಳೆಯರನ್ನು ಭಟ್ಕಳದ ಸಾಂತ್ವನ ಕೇಂದ್ರಕ್ಕೆ ಒಪ್ಪಿಸಲಾಗಿದೆ.
ದಾಳಿಯ ವೇಳೆ ಇಬ್ಬರು ಮಹಿಳೆಯರನ್ನು ರಕ್ಷಿಸಲಾಗಿದ್ದು, ಅವರೊಂದಿಗೆ ಇದ್ದ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.
ಪ್ರಕರಣ ಸಂಬಂಧಿಸಿ ಹೆರಾಡಿ- ಕಾಯ್ಕಿಣಿಯ ನಿವಾಸಿ ರೂಮ್ ಬಾಯ್ ಆರೋಪಿ ಸುರೇಶ ನಾಗಪ್ಪನಾಯ್ಕ (43), ಎಂಬಾತನನ್ನು ಬಂಧಿಸಲಾಗಿದೆ.
ಆರೋಪಿ ನಾಗಪ್ಪ ಹೆಚ್ಚಿನ ಹಣದ ಆಮಿಷ ತೋರಿಸಿ ಮಹಿಳೆಯರನ್ನು ಲಾಡ್ಜ್‌ನಲ್ಲಿ ಇಟ್ಟು ವೇಶ್ಯಾವಾಟಿಕೆ ನಡೆಸುತ್ತಿದ್ದ ಎನ್ನಲಾಗಿದೆ.






