ಆರೋಗ್ಯ

ಅರ್ಜೆಂಟೀನಾದಿಂದ ಹೊರಟಿದ್ದ ಹಡಗೊಂದರಲ್ಲಿ ‘ಹಂಟಾ ವೈರಸ್’: 3 ಮಂದಿ ಬಲಿ; 7 ಮಂದಿಗೆ ಸೋಂಕು

Views: 33

ಕನ್ನಡ ಕರಾವಳಿ ಸುದ್ದಿ: ಅರ್ಜೆಂಟೀನಾದಿಂದ ಹೊರಟಿದ್ದ ಪ್ರವಾಸಿ ಹಡಗೊಂದರಲ್ಲಿ ಹಂಟಾ ವೈರಸ್ ಕಾಣಿಸಿಕೊಂಡಿದ್ದು, ಇದುವರೆಗೆ ಮೂವರು ಪ್ರಯಾಣಿಕರನ್ನು ಬಲಿಪಡೆದಿದೆ. ಏಪ್ರಿಲ್ 1 ರಂದು ಉಶುವಾಯಾದಿಂದ ಹೊರಟಿದ್ದ ಈ ಹಡಗಿನಲ್ಲಿ ಒಟ್ಟು 147 ಮಂದಿ ಪ್ರಯಾಣಿಕರಿದ್ದರು. ಮೃತರ ಪೈಕಿ ದಂಪತಿಗಳೂ ಸೇರಿದ್ದು, ಒಟ್ಟು 7 ಜನರಲ್ಲಿ ಸೋಂಕು ದೃಢಪಟ್ಟಿದೆ. ಹಡಗಿನಲ್ಲಿ ಇಬ್ಬರು ಭಾರತೀಯ ಪ್ರಜೆಗಳೂ ಇದ್ದ ಕಾರಣ ಜಾಗತಿಕ ಮಟ್ಟದಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದೆ.

ಏನಿದು ಹಂಟಾ ವೈರಸ್?: ಹಂಟಾ ವೈರಸ್ ಜಗತ್ತಿಗೆ ಹೊಸದೇನಲ್ಲ, ಆದ್ರೆ ಇತ್ತೀಚಿನ ಪ್ರಕರಣಗಳು ಹೆಚ್ಚಿನ ಭೀತಿ ಹುಟ್ಟಿಸಿವೆ. ಇದು ಮುಖ್ಯವಾಗಿ ಇಲಿ ಹಾಗೂ ಹೆಗ್ಗಣಗಳ ಮೂಲಕ ಮನುಷ್ಯರಿಗೆ ಹರಡುವ ‘ರೋಡೆಂಟ್-ಬೋರ್ನ್’ ಸೋಂಕು. ಸೋಂಕಿತ ಇಲಿಗಳ ಮಲ, ಮೂತ್ರ ಅಥವಾ ಲಾಲಾರಸದಿಂದ ಕಲುಷಿತಗೊಂಡ ಧೂಳನ್ನು ಮನುಷ್ಯರು ಉಸಿರಾಟದ ಮೂಲಕ ಒಳಗೆಳೆದುಕೊಂಡಾಗ ಈ ಸೋಂಕು ತಗುಲುತ್ತದೆ. ಧಾನ್ಯದ ಗೋದಾಮುಗಳು, ಅಸ್ವಚ್ಛ ಕಟ್ಟಡಗಳು ಹಾಗೂ ಕಾಡು ಪ್ರದೇಶಗಳಲ್ಲಿ ಇಂತಹ ರೋಗಗಳ ಅಪಾಯ ಹೆಚ್ಚಿರುತ್ತದೆ.

ಕೋವಿಡ್‌ಗಿಂತ ಭಿನ್ನ: ಹಂಟಾ ವೈರಸ್ ಗಂಭೀರ ಕಾಯಿಲೆಯಾದರೂ ಇದನ್ನು ಕೊರೊನಾ ಮಹಾಮಾರಿಗೆ ಹೋಲಿಸುವುದು ಸರಿಯಲ್ಲ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಕೋವಿಡ್‌ನಂತೆ ಇದು ವೇಗವಾಗಿ ಮನುಷ್ಯರಿಂದ ಮನುಷ್ಯರಿಗೆ ಹರಡುವುದಿಲ್ಲ. ಆದ್ರೆ ದಕ್ಷಿಣ ಅಮೆರಿಕದಲ್ಲಿ ಕಂಡುಬಂದಿರುವ ‘ಆಂಡಿಸ್ ಸ್ಟ್ರೈನ್’ ಎಂಬ ರೂಪಾಂತರವು ಸೀಮಿತ ಪ್ರಮಾಣದಲ್ಲಿ ಮನುಷ್ಯರಿಂದ ಮನುಷ್ಯರಿಗೆ ಹರಡಬಲ್ಲದು ಎಂಬುದು ತಜ್ಞರ ಆತಂಕಕ್ಕೆ ಕಾರಣವಾಗಿದೆ.

ಪ್ರಸ್ತುತ ಹಡಗಿನಲ್ಲಿ ಕಾಣಿಸಿಕೊಂಡಿರುವ ಪ್ರಕರಣಗಳನ್ನು ವಿಶ್ವ ಆರೋಗ್ಯ ಸಂಸ್ಥೆ (WHO) ಗಂಭೀರವಾಗಿ ಗಮನಿಸುತ್ತಿದೆ. ಸೋಂಕು ಹರಡುವ ವೇಗ ಕಡಿಮೆಯಿದ್ದರೂ, ಸೋಂಕಿತರಲ್ಲಿ ಸಾವಿನ ಪ್ರಮಾಣ ಹೆಚ್ಚಿರುವುದರಿಂದ ಹೆಚ್ಚಿನ ಜಾಗ್ರತೆ ವಹಿಸುವಂತೆ ಸೂಚಿಸಲಾಗಿದೆ. ಸದ್ಯಕ್ಕೆ ಇದು ಜಾಗತಿಕ ತುರ್ತು ಪರಿಸ್ಥಿತಿಯಲ್ಲದಿದ್ದರೂ, ಅಂತರರಾಷ್ಟ್ರೀಯ ಪ್ರಯಾಣಿಕರ ಮೇಲೆ ತೀವ್ರ ನಿಗಾ ಇರಿಸಲಾಗಿದೆ. ಈ ವೈರಸ್‌ನ ಲಕ್ಷಣಗಳು ತೀವ್ರ ಜ್ವರ ಮತ್ತು ಉಸಿರಾಟದ ತೊಂದರೆಯಿಂದ ಕೂಡಿದ್ದು, ತಕ್ಷಣದ ಚಿಕಿತ್ಸೆ ಅತ್ಯಗತ್ಯವಾಗಿದೆ.

Related Articles

Back to top button
error: Content is protected !!