ಸಾಮಾಜಿಕ

ಪತ್ನಿ ಆರ್ಥಿಕವಾಗಿ ಸಫಲರಾಗಿದ್ದರೆ ಡಿವೋರ್ಸ್ ಬಳಿಕ ಜೀವನಾಂಶಕ್ಕೆ ಅರ್ಹಳಲ್ಲ:ಹೈಕೋರ್ಟ್ 

Views: 38

ಕನ್ನಡ ಕರಾವಳಿ ಸುದ್ದಿ: ಪತ್ನಿಯು ಸ್ವಂತ ಸಂಪಾದನೆಯಿಂದ ಕುಟುಂಬ ಹಾಗೂ ಪಾಲಕರ ನಿರ್ವಹಣೆ ಮಾಡುತ್ತಿರುವಾಗ, ಆಕೆ ಆರ್ಥಿಕವಾಗಿ ಪತಿಯ ಮೇಲೆ ಅವಲಂಬಿತಳಾಗಿದ್ದಾಳೆ ಎಂದು ಪರಿಗಣಿಸಲು ಸಾಧ್ಯವಿಲ್ಲ. ಹಾಗೆಯೇ, ಪತಿಯಿಂದ ಜೀವನಾಂಶ ಪಡೆಯಲು ಅರ್ಹಳಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.

ಚಿಕ್ಕಮಗಳೂರಿನ ಕೌಟುಂಬಿಕ ನ್ಯಾಯಾಲಯವು ಪತ್ನಿಗೆ ಮಾಸಿಕ 20 ಸಾವಿರ ರೂ. ಜೀವನಾಂಶ ನೀಡುವಂತೆ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಬೆಂಗಳೂರಿನ ಇಂಜಿನಿಯರ್ ಶುಭ್ರತ್ ಎ.ಆರ್. ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಾ.ಚಿಲ್ಲಾಕೂರ್ ಸುಮಲತಾ ಅವರಿದ್ದ ಏಕ ಸದಸ್ಯ ಪೀಠ ಈ ಆದೇಶ ನೀಡಿದೆ.

ಆರ್ಥಿಕ ಸ್ವಾವಲಂಬನೆ ಮತ್ತು ಉದ್ಯೋಗದ ಸಾಮರ್ಥ್ಯವು ಪತ್ನಿಯ ಜೀವನಾಂಶದ ಬೇಡಿಕೆಯನ್ನು ತಿರಸ್ಕರಿಸಲು ಸೂಕ್ತ ಆಧಾರವಾಗಿರಲಿದೆ ಎಂದು ಆದೇಶಿಸಿದ್ದು, ವಿಚಾರಣಾ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿದೆ.

ಪತ್ನಿಯು ಬಿ.ಇ. ಪದವೀಧರೆಯಾಗಿ ಖಾಸಗಿ ಸಂಸ್ಥೆಯೊಂದರಲ್ಲಿ ಮಾಸಿಕ 54,700 ರೂ. ಸಂಬಳ ಪಡೆಯುತ್ತಿರುವುದಾಗಿ ಪ್ರಮಾಣಪತ್ರದಲ್ಲಿ ವಿವರಿಸಿದ್ದಾರೆ. ಆಕೆ ಈ ಆದಾಯದಿಂದ ಹೆತ್ತವರನ್ನೂ ಸಲಹುತ್ತಿದ್ದಾರೆ. ಹೀಗಿರುವಾಗ, ಪತಿಯ ಮೇಲೆ ಆರ್ಥಿಕವಾಗಿ ಅವಲಂಬಿತಳಾಗಿದ್ದಾಳೆ ಎಂಬುದನ್ನು ಒಪ್ಪಲು ಸಾಧ್ಯವಿಲ್ಲ. ಪತಿಯ ಆದಾಯ (ಮಾಸಿಕ 2 ಲಕ್ಷ ರೂ.) ಪತ್ನಿಗಿಂತ ಹೆಚ್ಚಿರುವುದು ನಿಜ. ಆದರೆ, ವಿವಾಹಿತ ಮಹಿಳೆಯನ್ನು ಎಲ್ಲ ಸಂದರ್ಭಗಳಲ್ಲೂ ಪತಿಯೇ ನಿರ್ವಹಿಸಬೇಕು ಎಂದು ಕಾನೂನು ಹೇಳುವುದಿಲ್ಲ. ಪತ್ನಿಯ ಆದಾಯವು ಜೀವನ ನಿರ್ವಹಣೆಗೆ ತೀರಾ ಕಡಿಮೆ ಇದ್ದಾಗ ಮಾತ್ರ ಪತಿಯಿಂದ ಜೀವನಾಂಶ ಕೊಡಿಸಬಹುದು ಎಂದು ತಿಳಿಸಿ ಅರ್ಜಿ ಪುರಸ್ಕರಿಸಿದೆ. ದಂಪತಿ ನಡುವಿನ ಸಂಬಂಧ ಮತ್ತಷ್ಟು ಹಳಸದಂತೆ ತಡೆಯಲು ಪತಿ ಈವರೆಗೂ ಪತ್ನಿಗೆ ಪಾವತಿಸಿರುವ ಜೀವನಾಂಶವನ್ನು ಮರಳಿ ಪಡೆಯಲು ಅವಕಾಶ ಇರುವುದಿಲ್ಲ ಎಂದು ಪೀಠ ಹೇಳಿದೆ.

ಏನಿದು ಪ್ರಕರಣ?

ಪ್ರಕರಣಕ್ಕೆ ಸಂಬಂಧಿಸಿದ ದಂಪತಿ ನಡುವೆ ಭಿನ್ನಾಭಿಪ್ರಾಯ ಉಂಟಾಗಿದ್ದರಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಮಾಸಿಕ 85 ಸಾವಿರ ರೂ. ಜೀವನಾಂಶ ನೀಡುವಂತೆ ಕೋರಿ ಪತ್ನಿಯು ಚಿಕ್ಕಮಗಳೂರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಮಾಸಿಕ 20 ಸಾವಿರ ರೂ. ಜೀವನಾಂಶ ನೀಡುವಂತೆ ಪತಿಗೆ ಆದೇಶಿಸಿತ್ತು. ಇದನ್ನು ಪತಿ ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು.

Related Articles

Back to top button
error: Content is protected !!