ಕರಾವಳಿ

ಬಡಗುತಿಟ್ಟು ಯಕ್ಷಗಾನ ರಂಗದ ಹಿರಿಯ ಭಾಗವತ ಕಪ್ಪೆಕೆರೆ ಸುಬ್ರಾಯ ಹೆಗಡೆ ಇನ್ನಿಲ್ಲ

Views: 18

ಕನ್ನಡ ಕರಾವಳಿ ಸುದ್ದಿ: ಯಕ್ಷಗಾನ ಲೋಕದ ಕಪ್ಪೆಕೆರೆ ಸುಬ್ರಾಯ ಹೆಗಡೆ (79) ಅವರು ಬುಧವಾರ ವಿಧಿವಶರಾಗಿದ್ದಾರೆ. ಅವರ ಅಗಲಿಕೆಯಿಂದ ಬಡಗುತಿಟ್ಟು ಯಕ್ಷಗಾನ ರಂಗದ ಒಂದು ಸುವರ್ಣಯುಗ ಅಂತ್ಯಗೊಂಡಂತಾಗಿದೆ.

1947ರಲ್ಲಿ ಹೊನ್ನಾವರ ತಾಲೂಕಿನ ಹಡಿನಬಾಳದಲ್ಲಿ ಈಶ್ವರ ಹೆಗಡೆ ಮತ್ತು ಗೋಪಿ ಹೆಗಡೆ ದಂಪತಿಗಳ ಪುತ್ರನಾಗಿ ಜನಿಸಿದ ಸುಬ್ರಾಯರು, ಮೂಲತಃ ಯಕ್ಷಗಾನದ ಮನೆಯಿಂದಲೇ ಬಂದವರು. ಹಿರಿಯ ಸಹೋದರ ಕಪ್ಪೆಕೆರೆ ಮಹಾದೇವ ಹೆಗಡೆಯವರ ಹಾದಿಯಲ್ಲಿ ಸಾಗಿದ ಇವರು, ಕೆರೆಮನೆ ಮಹಾಬಲ ಹೆಗಡೆ ಮತ್ತು ಗಣಪತಿ ಹೆಗಡೆಯವರಲ್ಲಿ ಕಲೆ ಅಭ್ಯಾಸ ಮಾಡಿದರು.

ತಾಳ ಮತ್ತು ಲಯದ ಮೇಲಿನ ಅಪ್ರತಿಮ ಹಿಡಿತಕ್ಕಾಗಿ ಅವರಿಗೆ ‘ಲಯ ಬ್ರಹ್ಮ’ ಎಂಬ ಬಿರುದು ಒಲಿದುಬಂದಿತ್ತು. ಅರ್ಜುನ, ಬಲರಾಮ, ನಾರದನಂತಹ ಪ್ರಮುಖ ಪಾತ್ರಗಳಿಗೆ ಜೀವ ತುಂಬಿದ ಮುಮ್ಮೇಳದ ಸಮರ್ಥ ಕಲಾವಿದರಾಗಿದ್ದರು. ಚಂಡೆ ಮತ್ತು ಮದ್ದಳೆ ವಾದನದಲ್ಲೂ ಅವರು ಪ್ರಕಾಂಡ ಪಾಂಡಿತ್ಯ ಹೊಂದಿದ್ದರು.

ಯಕ್ಷಗಾನ ರಂಗದಲ್ಲಿ ಕಪ್ಪೆಕೆರೆ ಭಾಗವತರು ಎಂದು ಪ್ರಸಿದ್ಧರಾದ ಇವರು ಈ ರಂಗಭೂಮಿಗೆ ಯುಗಪುರುಷನಂತೆ ಕಾಣಿಸಿದರು. ಗುಂಡಬಾಳ, ಕೆರೆಮನೆ, ಕಮಲಶಿಲೆ, ಅಮೃತೇಶ್ವರಿ, ಸಾಲಿಗ್ರಾಮ, ಶಿರಸಿ, ಬಚ್ಚಗಾರು ಮೊದಲಾದ ಹಲವು ಪ್ರಮುಖ ಮೇಳಗಳಲ್ಲಿ ತನ್ನ ಭಾಗವತಿಕೆಯ ಸೊಗಸನ್ನು ತೋರಿದವರು. ಕೆರೆಮನೆ ಶಿವರಾಮ ಹೆಗಡೆ, ಕೆರೆಮನೆ ಮಹಾಬಲ ಹೆಗಡೆ, ಕೆರೆಮನೆ ಶಂಭು ಹೆಗಡೆ, ಕೆರೆಮನೆ ಗಜಾನನ ಹೆಗಡೆ ಮೊದಲಾದ ಯಕ್ಷಗಾನದ ಕೆರೆಮನೆ ಕಲಾವಿದರ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಜಲವಳ್ಳಿ ವೆಂಕಟೇಶ್ ರಾವ್, ಹಡಿನಬಾಳ ಮೊದಲಾದವರ ಅಪ್ರತಿಮ ಪ್ರತಿಭಾ ಪ್ರದರ್ಶನದಲ್ಲಿ ಇವರ ಕೊಡುಗೆ ಸದಾ ಸ್ಮರಣೀಯ.

 

 

Related Articles

Back to top button
error: Content is protected !!