ಜನಮನ

ಇಂದಿನಿಂದ LPG ಗ್ಯಾಸ್ ಬುಕ್ಕಿಂಗ್ ಸಂಪೂರ್ಣ ಡಿಜಿಟಲ್ : ಹೊಸ ನಿಯಮಗಳು ಹೀಗಿದೆ  

Views: 134

ಕನ್ನಡ ಕರಾವಳಿ ಸುದ್ದಿ: ಜಾಗತಿಕ ಇಂಧನ ಬಿಕ್ಕಟ್ಟಿನ ಹಿನ್ನೆಲೆ ಭಾರತದಲ್ಲಿ LPG ಕೊರತೆ ನಿಯಂತ್ರಿಸಲು ಕೇಂದ್ರ ಸರ್ಕಾರ ಮೇ 1ರಿಂದ ಹೊಸ ನಿಯಮ ಜಾರಿಗೆ ತರುತ್ತಿದೆ. ಗ್ಯಾಸ್ ಬುಕ್ಕಿಂಗ್ ಸಂಪೂರ್ಣ ಡಿಜಿಟಲ್ ಮಾಡಲಾಗಿದ್ದು, ವಿತರಣೆಗೆ OTP ಆಧಾರಿತ DAC ವ್ಯವಸ್ಥೆ ಕಡ್ಡಾಯವಾಗಿದೆ.

ಜಾಗತಿಕ ಮಟ್ಟದಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಇದರ ಪರಿಣಾಮ ಭಾರತ ಸೇರಿದಂತೆ ಏಷ್ಯಾದ ಹಲವು ದೇಶಗಳಲ್ಲಿ LPG ಗ್ಯಾಸ್‌ನ ಕೊರತೆ ಕಂಡುಬರುತ್ತಿದ್ದು, ಕೆಲವು ಪ್ರದೇಶಗಳಲ್ಲಿ ಹೋಟೆಲ್‌ಗಳು ತಾತ್ಕಾಲಿಕವಾಗಿ ಮುಚ್ಚಲ್ಪಟ್ಟಿವೆ. ಸಾಮಾನ್ಯ ಗ್ರಾಹಕರು ಗ್ಯಾಸ್ ಸಿಲಿಂಡರ್ ಪಡೆಯಲು ದೀರ್ಘ ಕಾಲ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆ ಕೇಂದ್ರ ಸರ್ಕಾರವು ಗ್ರಾಹಕರ ಅನುಕೂಲ ಹಾಗೂ ಪೂರೈಕೆ ವ್ಯವಸ್ಥೆಯ ಪಾರದರ್ಶಕತೆ ಹೆಚ್ಚಿಸಲು ಮೇ 1ರಿಂದ ಹೊಸ ನಿಯಮಗಳನ್ನು ಜಾರಿಗೆ ತರುವುದಾಗಿ ಘೋಷಿಸಿದೆ.

ಹೊಸ ನಿಯಮಗಳ ಪ್ರಕಾರ, ಗ್ಯಾಸ್ ಬುಕ್ಕಿಂಗ್ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಡಿಜಿಟಲ್ ಮಾಡಲಾಗುತ್ತದೆ. ಗ್ರಾಹಕರು ಗ್ಯಾಸ್ ಏಜೆನ್ಸಿಗಳಿಗೆ ಭೇಟಿ ನೀಡುವ ಅಗತ್ಯವಿಲ್ಲದೆ, ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಮಿಸ್ಡ್ ಕಾಲ್ ಅಥವಾ ವಾಟ್ಸಾಪ್ ಸಂದೇಶದ ಮೂಲಕ ಸುಲಭವಾಗಿ ಸಿಲಿಂಡರ್ ಬುಕ್ ಮಾಡಬಹುದು. ಇದರಿಂದ ಸಮಯ ಉಳಿತಾಯವಾಗುವ ಜೊತೆಗೆ ಸೇವೆಯ ವೇಗವೂ ಹೆಚ್ಚಲಿದೆ.

ಭದ್ರತಾ ಕ್ರಮವಾಗಿ, ವಿತರಣಾ ದೃಢೀಕರಣ ಕೋಡ್ (DAC) ವ್ಯವಸ್ಥೆಯನ್ನ ಕಡ್ಡಾಯಗೊಳಿಸಲಾಗಿದೆ. ಗ್ಯಾಸ್ ವಿತರಣೆ ವೇಳೆ ಗ್ರಾಹಕರ ಮೊಬೈಲ್‌ಗೆ OTP ಕಳುಹಿಸಲಾಗುತ್ತದೆ. ಈ OTPಯನ್ನ ವಿತರಣಾ ಸಿಬ್ಬಂದಿಗೆ ನೀಡಿದ ನಂತರವೇ ಸಿಲಿಂಡರ್ ಹಸ್ತಾಂತರವಾಗುತ್ತದೆ. ಇದರಿಂದ ವಿತರಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಭದ್ರತೆ ಹೆಚ್ಚಲಿದೆ.

ಇನ್ನೊಂದು ಪ್ರಮುಖ ಬದಲಾವಣೆ ಎಂದರೆ ಸಿಲಿಂಡರ್ ಬುಕ್ಕಿಂಗ್ ನಡುವಿನ ಅವಧಿ. ನಗರ ಪ್ರದೇಶಗಳಲ್ಲಿ ಕನಿಷ್ಠ 25 ದಿನಗಳ ಅಂತರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 45 ದಿನಗಳ ಅಂತರವನ್ನು ನಿಗದಿಪಡಿಸಲಾಗಿದೆ. ಕಪ್ಪು ಮಾರುಕಟ್ಟೆ ತಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಅದೇ ರೀತಿ ಒಂದೇ ಮನೆಯಲ್ಲಿ ಪೈಪ್ಡ್ ಗ್ಯಾಸ್ (PNG) ಮತ್ತು LPG ಎರಡನ್ನೂ ಒಂದೇ ಸಮಯದಲ್ಲಿ ಬಳಸಲು ಅವಕಾಶ ಇರುವುದಿಲ್ಲ. ಈಗಾಗಲೇ ಎರಡೂ ಸಂಪರ್ಕ ಹೊಂದಿರುವವರು ಒಂದನ್ನ ತ್ಯಜಿಸಬೇಕಾಗುತ್ತದೆ. ಕೊನೆಗೆ ಇ-ಕೆವೈಸಿ ಪ್ರಕ್ರಿಯೆಯನ್ನ ಕಡ್ಡಾಯಗೊಳಿಸಲಾಗಿದ್ದು, ಇದನ್ನು ಪೂರ್ಣಗೊಳಿಸದ ಗ್ರಾಹಕರು ಸಬ್ಸಿಡಿ ಸೌಲಭ್ಯ ಕಳೆದುಕೊಳ್ಳುವ ಸಾಧ್ಯತೆ ಇದೆ. ಈ ನಿಯಮಗಳು ಗ್ರಾಹಕರ ಸುರಕ್ಷತೆ ಮತ್ತು ಸರಬರಾಜು ವ್ಯವಸ್ಥೆಯ ಸುಧಾರಣೆಗೆ ನೆರವಾಗಲಿವೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

Related Articles

Back to top button
error: Content is protected !!