ತಾಂತ್ರಿಕ ದೋಷದಿಂದಾಗಿ ವಿಮಾನ ಅಪಾಯಕ್ಕೆ ಸಿಲುಕಿ ನಾಲ್ಕು ಗಂಟೆಗಳ ಕಾಲ ಆಕಾಶದಲ್ಲೇ ಹಾರಾಟ: ಕಣ್ಣೀರಿಟ್ಟ ಪ್ರಯಾಣಿಕರು!
Views: 106
ಕನ್ನಡ ಕರಾವಳಿ ಸುದ್ದಿ:ಹೈದರಾಬಾದ್‌ನಿಂದ ಹುಬ್ಬಳ್ಳಿಗೆ ಬರುತ್ತಿದ್ದ ವಿಮಾನವೊಂದು ತಾಂತ್ರಿಕ ದೋಷದಿಂದಾಗಿ ಅಪಾಯಕ್ಕೆ ಸಿಲುಕಿ, ಅಂತಿಮವಾಗಿ ಸುಖಾಂತ್ಯ ಕಂಡ ಘಟನೆ ನಡೆದಿದೆ. ಸುಮಾರು ನಾಲ್ಕು ಗಂಟೆಗಳ ಕಾಲ ಆಕಾಶದಲ್ಲೇ ವಿಮಾನ ಹಾರಾಟ ನಡೆಸಿತ್ತು.
ನಿನ್ನೆ ಮಧ್ಯಾಹ್ನ 3 ಗಂಟೆಗೆ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ Fly91 ಏರ್ IC3401 (ATR Turboprop AT7) ವಿಮಾನ ಹುಬ್ಬಳ್ಳಿಯತ್ತ ಪ್ರಯಾಣ ಬೆಳೆಸಿತ್ತು. ನಿಗದಿತ ಸಮಯದ ಪ್ರಕಾರ ಸಂಜೆ 4.30ಕ್ಕೆ ವಿಮಾನ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಬೇಕಿತ್ತು.
ಹುಬ್ಬಳ್ಳಿ ಸಮೀಪಿಸುತ್ತಿದ್ದಂತೆಯೇ ವಿಮಾನದಲ್ಲಿ ಏಕಾಏಕಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ವೇಗದ ಮೇಲೆ ಪೈಲಟ್ ನಿಯಂತ್ರಣ ಕಳೆದುಕೊಂಡಿದ್ದರಿಂದ ಹುಬ್ಬಳ್ಳಿಯಲ್ಲಿ ಇಳಿಯಲು ಸಾಧ್ಯವಾಗಲಿಲ್ಲ. ಇದರಿಂದ ಗಾಬರಿಗೊಂಡ ಪೈಲಟ್ ವಿಮಾನವನ್ನು ಸುರಕ್ಷಿತವಾಗಿ ಇಳಿಸಲು ಹರಸಾಹಸ ಪಟ್ಟರು. ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಗದ ವಿಮಾನ ಸುಮಾರು ನಾಲ್ಕು ಗಂಟೆಗಳ ಕಾಲ ಮುಂಡಗೋಡ, ದಾವಣಗೆರೆ ಹಾಗೂ ಶಿವಮೊಗ್ಗದ ಆಗಸದಲ್ಲಿಯೇ ಸುತ್ತಾಟ ನಡೆಸಿತು. ಕೆಳಗೆ ಇಳಿಯಲಾಗದೆ ಇತ್ತ ನಿಯಂತ್ರಣಕ್ಕೆ ಸಿಗದೆ ವಿಮಾನ ಹಾರಾಡುತ್ತಿದ್ದನ್ನು ಕಂಡು ಒಳಗಿದ್ದ ಪ್ರಯಾಣಿಕರು ದಿಗಿಲುಗೊಂಡರು.
ವಿಮಾನದ ಒಳಗಿದ್ದ ಪ್ರಯಾಣಿಕರು ದೇವರ ಮೊರೆ ಹೋದರು. ಕೆಲವರು ಕಣ್ಣೀರಿಡುತ್ತಾ ದೇವರಿಗೆ ಕೈ ಮುಗಿದರೆ, ಇನ್ನು ಕೆಲವರು ತಾವು ಬದುಕುಳಿಯುವುದು ಕಷ್ಟ ಎಂದು ಭಾವಿಸಿ ತಮ್ಮ ಕುಟುಂಬಸ್ಥರಿಗೆ ಮೊಬೈಲ್ ಮೂಲಕ ನಾವು ಜೀವಂತವಾಗಿ ಬರೋದು ಅನುಮಾನ ಎಂಬ ಭಾವುಕ ಸಂದೇಶಗಳನ್ನು ಕಳುಹಿಸಿದ್ದಾರೆ. ವಿಮಾನದ ಒಳಗೆ ಒಂದು ರೀತಿಯ ಸ್ಮಶಾನ ಮೌನ ಹಾಗೂ ಆತಂಕ ಮನೆಮಾಡಿತ್ತು.
ಕೊನೆಗೂ ಪೈಲಟ್ ಸಮಯಪ್ರಜ್ಞೆ ಹಾಗೂ ಹರಸಾಹಸದಿಂದಾಗಿ ವಿಮಾನವನ್ನು ಸಂಜೆ 7.30ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಮಾಡಲಾಯಿತು. ಆಗ ಪ್ರಯಾಣಿಕರು ನಿಟ್ಟುಸಿರು ಬಿಟ್ಟರು. 4 ಗಂಟೆಗಳ ಕಾಲ ಮೃತ್ಯುವಿನೊಂದಿಗೆ ಹೋರಾಡಿ ಬಂದ ಪ್ರಯಾಣಿಕರು, ಸುರಕ್ಷಿತವಾಗಿ ಕೆಳಗೆ ಇಳಿಯುತ್ತಿದ್ದಂತೆ ಭಾವುಕರಾಗಿ ಪರಸ್ಪರ ಅಪ್ಪಿಕೊಂಡು ಸಂಭ್ರಮಿಸಿದರು. ಸದ್ಯ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದು ತಾಂತ್ರಿಕ ದೋಷದ ಕುರಿತು ಏರ್ ಲೈನ್ಸ್ ತನಿಖೆ ನಡೆಸುತ್ತಿದೆ.






