ಸಾಂಸ್ಕೃತಿಕ

‘ಕಾಂತಾರ ಚಾಪ್ಟರ್ 1’ ಅಮೋಘ ಅಭಿನಯಕ್ಕೆ ರುಕ್ಮಿಣಿ ವಸಂತ್‌ಗೆ ಅತ್ಯುತ್ತಮ ನಟಿ ಪ್ರಶಸ್ತಿ : ರಿಷಬ್ ಶೆಟ್ಟಿ ತಂಡಕ್ಕೆ ಪ್ರಶಸ್ತಿಗಳ ಸುರಿಮಳೆ!

Views: 46

ಕನ್ನಡ ಕರಾವಳಿ ಸುದ್ದಿ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ಮೂಲಕ ಕನ್ನಡಿಗರ ಮನಗೆದ್ದ ನಟಿ ರುಕ್ಮಿಣಿ ವಸಂತ್, ಈಗ ರಾಷ್ಟ್ರ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ಇತ್ತೀಚೆಗೆ ನಡೆದ ಪ್ರತಿಷ್ಠಿತ INCA (ಭಾರತೀಯ ರಾಷ್ಟ್ರೀಯ ಸಿನಿ ಅಕಾಡೆಮಿ) 2026ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಅಮೋಘ ಅಭಿನಯಕ್ಕಾಗಿ ‘ಅತ್ಯುತ್ತಮ ನಟಿ’ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರುಕ್ಮಿಣಿ ವಸಂತ್ ಅತ್ಯಂತ ಭಾವುಕರಾಗಿ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು. “ಕಾಂತಾರ ಸಿನಿಮಾ ನನ್ನ ಜೀವನವನ್ನು ಹಲವು ರೀತಿಯಲ್ಲಿ ಬದಲಾಯಿಸಿದೆ. ಈ ಚಿತ್ರದ ಭಾಗವಾಗಿರುವುದು ನನ್ನ ಪಾಲಿನ ದೊಡ್ಡ ಗೌರವ. ಇಂತಹ ಅದ್ಭುತ ಅವಕಾಶ ನೀಡಿದ ರಿಷಬ್ ಸರ್, ಪ್ರಗತಿ ಶೆಟ್ಟಿ ಹಾಗೂ ಹೊಂಬಾಳೆ ಫಿಲ್ಮ್ಸ್‌ಗೆ ನಾನು ಚಿರಋಣಿ” ಎಂದು ನುಡಿದರು. ಚಿತ್ರದಲ್ಲಿ ನಿಭಾಯಿಸಿದ ‘ಕನಕವತಿ’ ಎಂಬ ಪಾತ್ರವು ವೃತ್ತಿಜೀವನಕ್ಕೆ ಹೊಸ ಆಯಾಮ ನೀಡಿದೆ.

INCA ಪ್ರಶಸ್ತಿ ವೇದಿಕೆಯಲ್ಲಿ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಕನ್ನಡ ವಿಭಾಗದಲ್ಲಿ ಅಧಿಪತ್ಯ ಸಾಧಿಸಿದೆ. ರುಕ್ಮಿಣಿ ಅತ್ಯುತ್ತಮ ನಟಿ ಪ್ರಶಸ್ತಿ ಸಂದರೆ, ರಿಷಬ್ ಶೆಟ್ಟಿ ಅತ್ಯುತ್ತಮ ನಟ ಹಾಗೂ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಪೌರಾಣಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯ ಈ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದಿದೆ.

‘ಬೀರ್‌ಬಲ್’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ ರುಕ್ಮಿಣಿ, ‘ಸಪ್ತ ಸಾಗರದಾಚೆ ಎಲ್ಲೋ’ ಮೂಲಕ ಮನೆಮಾತಾದವರು. ಆದ್ರೆ ‘ಕಾಂತಾರ’ದಂತಹ ಜಾಗತಿಕ ಫ್ರಾಂಚೈಸಿಯ ಭಾಗವಾಗಿರುವುದು ಪ್ಯಾನ್-ಇಂಡಿಯಾ ಮಟ್ಟದಲ್ಲಿ ದೊಡ್ಡ ಬ್ರೇಕ್ ನೀಡಿದೆ. ಸದ್ಯ ರುಕ್ಮಿಣಿ ಕನ್ನಡ ಮಾತ್ರವಲ್ಲದೆ ತಮಿಳು ಮತ್ತು ತೆಲುಗು ಚಿತ್ರರಂಗದ ಸ್ಟಾರ್ ನಟರ ಜೊತೆ ಕೆಲಸ ಮಾಡುತ್ತಾ ಬ್ಯುಸಿಯಾಗಿದ್ದಾರೆ.

ಒಟ್ಟಾರೆ.. ಹಂತ ಹಂತವಾಗಿ ಬೆಳೆದು ಇಂದು ರಾಷ್ಟ್ರ ಮಟ್ಟದ ಗೌರವಕ್ಕೆ ಪಾತ್ರವಾಗಿರುವ ರುಕ್ಮಿಣಿ ವಸಂತ್ ಸಾಧನೆಗೆ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಶುಭಾಶಯ ಕೋರಿದ್ದಾರೆ.

Related Articles

Back to top button
error: Content is protected !!