ಇತರೆ

ಭೀಕರ ಸರಣಿ ಅಪಘಾತ: ರಸ್ತೆ ಬದಿಗೆ ಉರುಳಿ ಬಿದ್ದ ಲಾರಿ, ಇಬ್ಬರು ಸಾವು

Views: 49

ಕನ್ನಡ ಕರಾವಳಿ ಸುದ್ದಿ: ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಸಮೀಪದ ಡಣಾಪುರದಲ್ಲಿ ಇಂದು ಬೆಳಗ್ಗೆ ರಾಷ್ಟ್ರೀಯ ಹೆದ್ದಾರೆ 50ರಲ್ಲಿ ಭೀಕರ ಸರಣಿ ಅಪಘಾತ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಾಹ್ನವಿ ಎಸ್. ಅವರು ತಿಳಿಸಿದ್ದಾರೆ.

ಬೆಳ್ಳುಳ್ಳಿ ತುಂಬಿಕೊಂಡು ಹರಿಯಾಣದಿಂದ ಬಂದ ಲಾರಿಯೊಂದು ನಿಯಂತ್ರಣ ತಪ್ಪಿ ಕಾರು, ಸರ್ಕಾರಿ ಬಸ್ ಹಾಗೂ ಕನಿಷ್ಠ ಮೂರು ಬೈಕ್‌ಗಳಿಗೆ ಡಿಕ್ಕಿ ಹೊಡೆದಿದೆ. ಬಳಿಕ ಲಾರಿ ರಸ್ತೆ ಬದಿಗೆ ಉರುಳಿಬಿದ್ದ ಪರಿಣಾಮ ಅಪಘಾತದ ತೀವ್ರತೆ ಹೆಚ್ಚಾಗಿದೆ. ಹೊಸಪೇಟೆಯಿಂದ ಚಿತ್ರದುರ್ಗದತ್ತ ತೆರಳುತ್ತಿದ್ದ ಸರ್ಕಾರಿ ಬಸ್‌ಗೆ ಲಾರಿ ಹಿಂಬದಿಯಿಂದ ಗುದ್ದಿದ ಪರಿಣಾಮ ಬಸ್‌ನಲ್ಲಿದ್ದ ಸುಮಾರು 25 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ಅವರು ಹೇಳಿದರು.

ಗಾಯಾಳುಗಳನ್ನು ತಕ್ಷಣವೇ ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಅಪಘಾತ ಸಂಭವಿಸಿದ ಸ್ಥಳದಲ್ಲಿ ಹೆದ್ದಾರಿ ದುರಸ್ತಿ ಹಾಗೂ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಒಂದೇ ಬದಿಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಇದೇ ಕಾರಣದಿಂದ ಅಪಘಾತ ಸಂಭವಿಸಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

ಇದೇ ಲಾರಿ ಅಪಘಾತಕ್ಕೂ ಮುನ್ನ ಸುಮಾರು ಮೂರು ಕಿಲೋಮೀಟರ್ ದೂರದಲ್ಲಿರುವ ಸ್ಮಯರ್ ಕಂಪನಿ ಬಳಿ ಎರಡು ಬೈಕ್‌ಗಳಿಗೆ ಹಿಟ್ ಅಂಡ್ ರನ್ ಮಾಡಿ ಬಂದಿತ್ತು. ಆ ಘಟನೆದಲ್ಲಿ ಮೂವರು ಗಾಯಗೊಂಡಿದ್ದಾರೆ. ಅಪಘಾತದ ಪರಿಣಾಮವಾಗಿ ಹೆದ್ದಾರಿಯಲ್ಲಿ ಎರಡೂ ಬದಿಗಳಲ್ಲಿ ಸುಮಾರು ಮೂರು ಕಿಲೋಮೀಟರ್‌ವರೆಗೆ ಸಂಚಾರ ದಟ್ಟಣೆ ಉಂಟಾಗಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ವಿಜಯನಗರ ಜಿಲ್ಲಾ ಎಸ್ಪಿ ಜಾಹ್ನವಿ ಎಸ್, ಮರಿಯಮ್ಮನ ಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Related Articles

Back to top button
error: Content is protected !!