ಆರೋಗ್ಯ

BP 200 ದಾಟಿದರೆ ಏನಾಗುತ್ತೆ, ಲಕ್ಷಣಗಳೇನು ? ವೈದ್ಯರು ನೀಡಿದ ಎಚ್ಚರಿಕೆ ಏನು?

Views: 65

ಕನ್ನಡ ಕರಾವಳಿ ಸುದ್ದಿ: ರಕ್ತದೊತ್ತಡ ಹೆಚ್ಚು ಕಡಿಮೆ ಆಗುವುದು ಸಾಮಾನ್ಯ ಸಮಸ್ಯೆಯಾಗಿದ್ದರೂ, ಅದು 200 ದಾಟಿದರೆ ಅತ್ಯಂತ ಅಪಾಯಕಾರಿ ಪರಿಸ್ಥಿತಿಗೆ ತಲುಪುತ್ತದೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಇಂತಹ ಪರಿಸ್ಥಿತಿಯನ್ನು ವೈದ್ಯಕೀಯವಾಗಿ “ಹೈಪರ್‌ಟೆನ್ಸಿವ್ ಕ್ರೈಸಿಸ್” ಎಂದು ಕರೆಯಲಾಗುತ್ತದೆ.

ವೈದ್ಯಕೀಯ ತಜ್ಞರ ಪ್ರಕಾರ, 180/120 mmHgಗಿಂತ ಹೆಚ್ಚು ರಕ್ತದೊತ್ತಡ ಬಂದರೆ ತಕ್ಷಣ ಚಿಕಿತ್ಸೆ ಅಗತ್ಯ. ಒಂದು ವೇಳೆ 200ರ ಮಟ್ಟಕ್ಕೆ ಏರಿದರೆ, ಹೃದಯದ ಮೇಲೆ ಭಾರೀ ಒತ್ತಡ ಉಂಟಾಗುತ್ತದೆ. ಮೆದುಳಿಗೆ ರಕ್ತಪ್ರವಾಹದ ವ್ಯತ್ಯಾಸ ಉಂಟಾಗುತ್ತದೆ. ರಕ್ತನಾಳಗಳ ಹಾನಿಯಾಗಲಿದ್ದು, ತಕ್ಷಣದ ಸ್ಟ್ರೋಕ್ ಅಥವಾ ಹೃದಯಾಘಾತದ ಅಪಾಯ ಹೆಚ್ಚಳವಾಗುತ್ತದೆ ಎಂದು ಹೇಳಲಾಗಿದೆ.

ಅಧಿಕ ರಕ್ತದೊತ್ತಡದ ಲಕ್ಷಣಗಳು

ಹೆಚ್ಚಿನ ಸಂದರ್ಭಗಳಲ್ಲಿ ಯಾವುದೇ ಲಕ್ಷಣ ಕಾಣಿಸದೇ ಇರಬಹುದು. ಆದರೆ ಗಂಭೀರ ಮಟ್ಟದಲ್ಲಿ ತೀವ್ರ ತಲೆನೋವು, ಉಸಿರಾಟದ ತೊಂದರೆ, ಮೂಗಿನಿಂದ ರಕ್ತಸ್ರಾವ, ಎದೆನೋವು, ದೃಷ್ಟಿ ಸಮಸ್ಯೆ ಮತ್ತು ಮಾತನಾಡಲು ಕಷ್ಟ ಅಥವಾ ದುರ್ಬಲತೆ ಎದುರಾಗುತ್ತದೆ.

ದೇಹದ ಮೇಲೆ ಪರಿಣಾಮ

ರಕ್ತದೊತ್ತಡ ನಿಯಂತ್ರಣದಲ್ಲಿರದಿದ್ದರೆ ಹೃದಯಾಘಾತ, ಸ್ಟ್ರೋಕ್, ಕಿಡ್ನಿಗೆ ಹಾನಿ, ಕಣ್ಣು ದೃಷ್ಟಿ ಕಳೆದುಕೊಳ್ಳುವುದು ಮತ್ತು ಹೃದಯ ವೈಫಲ್ಯದ ಅಪಾಯ ತುಂಬಾ ಹೆಚ್ಚಾಗುತ್ತದೆ.

ಬಿಪಿ “ಸೈಲೆಂಟ್ ಕಿಲ್ಲರ್” ಏಕೆ?

ರಕ್ತದೊತ್ತಡವನ್ನು ಸೈಲೆಂಟ್‌ ಕಿಲ್ಲರ್ ಎಂದು ಕರೆಯುತ್ತಾರೆ.. ಏಕೆಂದರೆ ಯಾವುದೇ ಲಕ್ಷಣಗಳಿಲ್ಲದೇ ವರ್ಷಗಳ ಕಾಲ ಇರುತ್ತದೆ. ತಕ್ಷಣವೇ ಗಂಭೀರ ಸಮಸ್ಯೆ ಉಂಟುಮಾಡಬಹುದು ಮತ್ತು ಪರೀಕ್ಷೆ ಮಾಡಿದಾಗ ಮಾತ್ರ ಪತ್ತೆಯಾಗುತ್ತದೆ.

ತಕ್ಷಣ ಏನು ಮಾಡಬೇಕು?

ರಕ್ತದೊತ್ತಡ 200 ದಾಟಿದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕು, ತುರ್ತು ಚಿಕಿತ್ಸೆಗೆ ಹೋಗಬೇಕು ಮತ್ತು ಯಾವುದೇ ಕಾರಣಕ್ಕೂ ಸ್ವಯಂ ಔಷಧಿ ತೆಗೆದುಕೊಳ್ಳಬಾರದು.

ಒಟ್ನಲ್ಲಿ ರಕ್ತದೊತ್ತಡ 200 ದಾಟುವುದು ಜೀವಕ್ಕೆ ಅಪಾಯಕಾರಿಯಾದ ಸ್ಥಿತಿ. ನಿಯಮಿತವಾಗಿ BP ಪರೀಕ್ಷೆ ಮಾಡಿಸಿಕೊಳ್ಳುವುದು, ಆರೋಗ್ಯಕರ ಜೀವನಶೈಲಿ ಅನುಸರಿಸುವುದು ಮತ್ತು ವೈದ್ಯರ ಸಲಹೆ ಪಾಲಿಸುವುದು ಅತ್ಯಗತ್ಯ.

ಇತ್ತೀಚಿನ ದಿನಗಳಲ್ಲಿ ಅಧಿಕ ರಕ್ತದೊತ್ತಡ ಸಮಸ್ಯೆ ಪ್ರಕರಣ ವೇಗವಾಗಿ ಹೆಚ್ಚಾಗುತ್ತಿದೆ. ಎಲ್ಲಾ ವಯಸ್ಸಿನವರನ್ನು ಈ ಸಮಸ್ಯೆ ಕಾಡಲು ಶುರು ಮಾಡಿದೆ. ಸಾಮಾನ್ಯವಾಗಿ ಬಿಪಿ 120/80 mmHg ಇದ್ದರೆ ಇದನ್ನು ನಾರ್ಮಲ್ ಎಂದು ಪರಿಗಣಿಸಲಾಗುತ್ತದೆ, ಆದರೆ ಈ ಮಟ್ಟ ಮಿತಿ ಮೀರಿದಾಗ, ಅಧಿಕ ರಕ್ತದೊತ್ತಡ ಎಂಬ ಸಮಸ್ಯೆ ಉಂಟಾಗುತ್ತದೆ.

Related Articles

Back to top button
error: Content is protected !!