ಇತರೆ

ಹಲ್ಲೆ ಪ್ರಕರಣ: ಮಾಜಿ ಸಂಸದ ಅನಂತಕುಮಾರ್ ಹೆಗಡೆ ಪುತ್ರನ ವಿರುದ್ಧ ವಿಚಾರಣೆಗೆ ಹೈಕೋರ್ಟ್ ತಡೆ 

Views: 37

ಕನ್ನಡ ಕರಾವಳಿ ಸುದ್ದಿ: ಗಲಾಟೆ ಪ್ರಕರಣದಲ್ಲಿ ಬಿಜೆಪಿ ಮಾಜಿ ಸಂಸದ ಅನಂತಕುಮಾ‌ರ್ ಹೆಗಡೆ ಪುತ್ರ ಅಶುತೋಷ್ ವಿರುದ್ಧದ ವಿಚಾರಣಾ ಪ್ರಕ್ರಿಯೆಗೆ ಹೈಕೋರ್ಟ್ ಗುರುವಾರ ತಡೆಯಾಜ್ಞೆ ನೀಡಿದೆ.

ಎಫ್‌ಐಆ‌ರ್ ಮತ್ತು ಆರೋಪ ಪಟ್ಟಿಯಲ್ಲಿ ತಮ್ಮ ಹೆಸರಿಲ್ಲದೇ ಇರುವುದರಿಂದ ಪ್ರಕರಣದಿಂದ ಕೈಬಿಡುವಂತೆ ಕೋರಿ ಅಶುತೋಷ್ ಹೆಗಡೆ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌. ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ನಾಲ್ಕನೇ ಆರೋಪಿ ಅಶುತೋಷ್ ವಿರುದ್ಧ ಮೇಲ್ನೋಟಕ್ಕೆ ಅಪರಾಧವಾಗುವಂಥ ಆರೋಪಗಳಿಲ್ಲ. ಮುಂದಿನ ವಿಚಾರಣೆಗೆ ಒಳಪಟ್ಟು ಮುಂದಿನ ಪ್ರಕ್ರಿಯೆಗೆ ತಡೆ ನೀಡಲಾಗಿದೆ. ನಾಲ್ಕನೇ ಆರೋಪಿಗೆ ಮಾತ್ರ ಈ ಮಧ್ಯಂತರ ಆದೇಶ ಸೀಮೀತವಾಗಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಅಶುತೋಷ್ ಪರ ವಾದ ಮಂಡಿಸಿದ್ದ ವಕೀಲ ಪವನ್‌ಚಂದ್ರ ಶೆಟ್ಟಿ, ಎಫ್‌ಐಆ‌ರ್ ಅಥವಾ ಆರೋಪ ಪಟ್ಟಿಯಲ್ಲಿ ಅಶುತೋಷ್ ಹೆಸರಿಲ್ಲ. ತನ್ನ ಅಜ್ಜನನ್ನು ನೋಡಲು ಅವರು ಭಾರತಕ್ಕೆ ಬಂದಿದ್ದರು. ತಂದೆಯ ಅಧಿಕೃತ ಕಾರಿನಲ್ಲಿ ವಾಪಸ್ ಬರುವಾಗ ಕೃತ್ಯ ನಡೆದಿದ್ದು, ಅದರಲ್ಲಿ ಅಶುತೋಷ್ ಪಾತ್ರವಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.

ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್ ಅವರು, ಅರ್ಜಿಯಲ್ಲಿ ಮೊದಲಿಗೆ ಅಶುತೋಷ್ ಪಕ್ಷಕಾರರಾಗಿಲ್ಲ. ಆದ್ದರಿಂದ, ತಿದ್ದುಪಡಿ ಅಥವಾ ಪ್ರತ್ಯೇಕ ಅರ್ಜಿ ಸಲ್ಲಿಸಿದರೆ ನ್ಯಾಯಾಲಯದ ಅದನ್ನು ಪರಿಗಣಿಸಬಹುದು ಎಂದಿದ್ದರು.

ಏನಿದು ಪ್ರಕರಣ

ತುಮಕೂರಿನಲ್ಲಿ ಮದುವೆಯಲ್ಲಿ ಪಾಲ್ಗೊಂಡು ಕಾರ್‌ನಲ್ಲಿ ಹಳೇ ನಿಜಗಲ್ ಬಳಿ ಬರುತಿದ್ದಾಗ ಹಿಂದಿನಿಂದ ಅತಿವೇಗವಾಗಿ ಚಾಲನೆ ಮಾಡಿಕೊಂಡು ಬಂದ ಮತ್ತೊಂದು ಕಾರಿನ ಚಾಲಕ ನಮ್ಮ ಕಾರನ್ನು ನಿಲ್ಲಿಸುವಂತೆ ಹೇಳಿದರು. ಕಾರು ನಿಲುಗಡೆ ಮಾಡುತ್ತಿದ್ದಂತೆಯೇ ಮುಖಕ್ಕೆ ಗುದ್ದಿದರು. ಮತ್ತೊಬ್ಬ ವ್ಯಕ್ತಿ ನಮ್ಮನ್ನು ಕಾರಿನಿಂದ ಹೊರಗೆ ಎಳೆದುಕೊಂಡು ಹಲ್ಲೆ ನಡೆಸಿದರು. ಇದರಿಂದ, ನಮ್ಮೊಂದಿಗಿದ್ದ ಸಲ್ಮಾನ್ ಖಾನ್ ಎಂಬಾತನ ಮೂರು ಹಲ್ಲುಗಳು ಮುರಿದಿವೆ ಎಂದು ಗಾಯಾಳು, ಹಾಲೇನಹಳ್ಳಿಯ ಸೈಫ್ ಖಾನ್ ದೂರು ನೀಡಿದ್ದರು.

ಅನಂತ್ ಕುಮಾರ್ ಹೆಗಡೆ ಅವರು ಆ ಕಾರಿನಲ್ಲಿದ್ದರು. ಅವರು ಕರೆದ ತಕ್ಷಣವೇ ಉಳಿದವರು ಬಂದು ನಮ್ಮ ಮೇಲೆ ಹಲ್ಲೆ ಮಾಡಿದರು. ನಮ್ಮ ತಾಯಿ ಮೇಲೆ ಅನಂತ್ ಕುಮಾರ್ ಹಲ್ಲೆ ನಡೆಸಿದರು. ಭದ್ರತಾ ಸಿಬ್ಬಂದಿ ಪಿಸ್ತೂಲ್ ತೋರಿಸಿ ಜೀವ ಬೆದರಿಕೆ ಹಾಕಿದರು ಎಂದು ದೂರಿನಲ್ಲಿ ಆರೋಪಿಸಿದ್ದರು. ದೂರು ಆಧರಿಸಿ ದಾಬಸ್‌ಪೇಟೆ ಠಾಣೆ ಪೊಲೀಸರು ಅನಂತ್ ಕುಮಾರ್ ಹೆಗಡೆ, ಅವರ ಭದ್ರತಾ ಸಿಬ್ಬಂದಿ ಶ್ರೀಧರ್ ಹಾಗೂ ಕಾರು ಚಾಲಕ ಮಹೇಶ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Related Articles

Back to top button
error: Content is protected !!