ಇತರೆ

ಕಾರ್ಕಳ: ನವವಿವಾಹಿತ ಉದ್ಯಮಿ ಆತ್ಮಹತ್ಯೆ ಪ್ರಕರಣ;ಪತ್ನಿ ಸೌಮ್ಯ ಶೆಟ್ಟಿ ಬಂಧನ

Views: 235

ಕನ್ನಡ ಕರಾವಳಿ ಸುದ್ದಿ: ಉಡುಪಿ ಜಿಲ್ಲೆಯ ಕಾರ್ಕಳ ಸಮೀಪ ನವವಿವಾಹಿತ ಉದ್ಯಮಿ ಸುದೀಪ್ ರೈ (36) ಅವರ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಕಳ ಪೊಲೀಸರು ತನಿಖೆ ನಡೆಸಿ  ಮೃತರ ಪತ್ನಿ ಸೌಮ್ಯ ಶೆಟ್ಟಿ (28) ಅವರನ್ನು ಬಂಧಿಸಿದ್ದಾರೆ.

ಮೂಲತಃ ಕಡಬ ತಾಲೂಕು ನೆಲ್ಯಾಡಿ ಮೂಲದ ಸುದೀಪ್ ರೈ ಮತ್ತು ಕಾರ್ಕಳ ತಾಲೂಕು ಕಜೆ ನಿವಾಸಿ, ಪುತ್ತೂರು ಸಬ್-ರಿಜಿಸ್ಟ್ರಾರ್ ಕಚೇರಿಯಲ್ಲಿ ಉದ್ಯೋಗಿಯಾಗಿರುವ ಸೌಮ್ಯ ಶೆಟ್ಟಿ ಅವರು ಫೆಬ್ರವರಿ 17ರಂದು ರಿಜಿಸ್ಟರ್ ಮದುವೆಯಾಗಿದ್ದರು. ಮದುವೆಯಾದ ಕೆಲವೇ ದಿನಗಳಲ್ಲಿ ದಂಪತಿಗಳ ನಡುವೆ ಅಸಮಾಧಾನ ಉಂಟಾಗಿದ್ದಂತೆ ತಿಳಿದುಬಂದಿದೆ.

ಮಾರ್ಚ್ 17ರಂದು ಸುದೀಪ್ ರೈ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಉಡುಪಿ ಹಾಗೂ ಮಂಗಳೂರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರಿದರೂ, ಮಾರ್ಚ್ 30ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಮಗನ ಸಾವಿನ ಕುರಿತು ಸಂಶಯ ವ್ಯಕ್ತಪಡಿಸಿದ ಸುದೀಪ್ ಅವರ ತಂದೆ ದಾಮೋದರ ರೈ ಅವರು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದಂಪತಿಗಳ ನಡುವಿನ ಕಲಹ ಹಾಗೂ ಮಾನಸಿಕ ಹಿಂಸೆ ಹಿನ್ನೆಲೆ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಶಂಕೆಯ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದರು.

ತನಿಖೆಯಲ್ಲಿ ಲಭ್ಯವಾದ ಸಾಕ್ಷ್ಯಾಧಾರಗಳ ಆಧಾರದಲ್ಲಿ ಆರೋಪಿತೆ ಸೌಮ್ಯ ಶೆಟ್ಟಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆಕೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಸದ್ಯ ತನಿಖೆ ನಡೆಯುತ್ತಿದೆ.

Related Articles

Back to top button
error: Content is protected !!