ಪತಿ ಮಲಗಿದ್ದಾರೆ ಎಂದು ಕೊಳೆತ ಶವದೊಂದಿಗೆ 10 ದಿನ ಕಳೆದ ಪತ್ನಿ
Views: 202
ಕನ್ನಡ ಕರಾವಳಿ ಸುದ್ದಿ: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ಅನಾರೋಗ್ಯದಿಂದ ಮಲಗಿದ್ದಲ್ಲೇ ಮೃತಪಟ್ಟ ಪತಿಯ ಶವದದೊಂದಿಗೆ ಮಾನಸಿಕ ಅಸ್ವಸ್ಥ ಪತ್ನಿಯೊಬ್ಬರು ಬರೋಬ್ಬರಿ 10 ದಿನಗಳ ಕಾಲ ಕಳೆದಿದ್ದಾರೆ. ಪತಿ ಸತ್ತಿರುವುದೇ ಪತ್ನಿಗೆ ತಿಳಿದಿಲ್ಲ ಮಕ್ಕಳು ದೂರದಲ್ಲಿದ್ದು, ಅವರಿಗೂ ಈ ವಿಚಾರ ತಿಳಿದಿಲ್ಲ.
77 ವರ್ಷದ ಸಿರಿಲ್ ಮೋನಿಸ್ ಅವರು ವಯೋಸಹಜ ಅನಾರೋಗ್ಯದಿಂದ ಮಲಗಿದ್ದಲ್ಲಿಯೇ ಮೃತಪಟ್ಟಿದ್ದರು. ಆದರೆ ಮನೆಯಲ್ಲಿದ್ದ ಮಾನಸಿಕ ಅಸ್ವಸ್ಥ ಪತ್ನಿಗೆ ತನ್ನ ಪತಿ ಮೃತಪಟ್ಟಿದ್ದಾರೆ ಎಂಬ ಅರಿವೇ ಬಂದಿಲ್ಲ. ಇಂಥ ಪರಿಸ್ಥಿತಿಯಲ್ಲಿ ಪತಿ ಬದುಕಿದ್ದಾರೆ, ಮಲಗಿದ್ದಾರೆಂದೇ ಭಾವಿಸಿ ಪತ್ನಿ ಪತಿಯ ಶವದ ಪಕ್ಕದಲ್ಲೇ 10 ದಿನ ಕಳೆದಿದ್ದಾರೆ.
ಮೃತ ಮೋನಿಸ್ ಅವರ ಮಗ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿದ್ದರೆ, ಮಗಳು ದುಬೈನಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಮಗ ನಿತ್ಯ ತಾಯಿಗೆ ಫೋನ್ ಮಾಡಿ ಅಪ್ಪನ ಆರೋಗ್ಯದ ಬಗ್ಗೆ ವಿಚಾರಿಸುತ್ತಿದ್ದನಂತೆ. ಆದರೆ ಪ್ರತಿ ಸಲ ಮಗ ಫೋನ್ ಮಾಡಿ ಅಪ್ಪನ ಬಗ್ಗೆ ವಿಚಾರಿಸಿದಾಗ ಮಾನಸಿಕ ಅಸ್ವಸ್ಥ ತಾಯಿ ಮಾತ್ರ ‘ಅಪ್ಪ ಚೆನ್ನಾಗಿದ್ದಾರೆ, ಮಲಗಿದ್ದಾರೆ’ ಎಂದೇ ಹೇಳುತ್ತಿದ್ದಳಂತೆ. ಇದರಿಂದ ಮಗನಿಗೂ ಅಪ್ಪ ಮೃತಪಟ್ಟಿರುವ ಬಗ್ಗೆ ತಿಳಿದಿಲ್ಲ.
ಹತ್ತು ದಿನಗಳು ಕಳೆದಿದ್ದರಿಂದ ಮೋನಿಸ್ ಮೃತದೇಹ ಸಂಪೂರ್ಣ ಕೊಳೆತು ಹುಳ ಹಿಡಿದಿತ್ತು. ಆ ಮನೆಯಿಂದ ವಿಪರೀತ ವಾಸನೆ ಬರಲಾರಂಭಿಸಿದಾಗ ಸಂಶಯಗೊಂಡ ಅಕ್ಕಪಕ್ಕದ ನಿವಾಸಿಗಳು ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಬಂದು ನೋಡಿದಾಗ ಬೀಭತ್ಸ ದೃಶ್ಯ ಕಂಡು ಬೆಚ್ಚಿಬಿದ್ದಿದ್ದಾರೆ.






