ಪ್ರಿಯಕರನನ್ನು ಮದುವೆ ಆಗಿದ್ದಕ್ಕೆ ಮಗಳನ್ನೇ ಕೊಂದ ತಂದೆ -ಆತ್ಮಹತ್ಯೆ: ಇನ್ಸ್‌ಪೆಕ್ಟರ್ ಸಸ್ಪೆಂಡ್
Views: 129
ಕನ್ನಡ ಕರಾವಳಿ ಸುದ್ದಿ: ಪ್ರೀತಿಸಿದ ಯುವಕನನ್ನು ಮದುವೆ ಆಗಿದ್ದಕ್ಕೆ ತಂದೆ ತನ್ನ ಮಗಳನ್ನೇ ಹತ್ಯೆಗೈದಿರುವ ಘಟನೆ ಆಂಧ್ರಪ್ರದೇಶದ ಮಾಚೆರ್ಲಾ ಪಟ್ಟಣದಲ್ಲಿ ನಡೆದಿದೆ. ಮಾರ್ಚ್‌ನಲ್ಲಿ ಈ ಹತ್ಯೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಚೌಡೇಶ್ವರಿ(22) ಹತ್ಯೆಯಾದ ಮಹಿಳೆ. ಈಕೆ ಯುವಕನೊಬ್ಬನ ಜತೆ ಪ್ರೀತಿಯಲ್ಲಿದ್ದಳು. ಇವರ ಪ್ರೇಮಕ್ಕೆ ಕುಟುಂಬಸ್ಥರ ವಿರೋಧವಿತ್ತು. ಮಾ.4ರಂದು ಪೋಷಕರ ಇಚ್ಛೆಗೆ ವಿರುದ್ಧವಾಗಿ ಮನೆ ಬಿಟ್ಟು ಹೋಗಿ ಮದುವೆಯಾಗಿದ್ದಳು. ಈ ಕುರಿತು ಕುಟುಂಬಸ್ಥರು ದೂರು ದಾಖಲಿಸಿದ್ದರು. ಮಾಚೆರ್ಲಾ ಪಟ್ಟಣದ ಸರ್ಕಲ್ ಇನ್ಸ್‌ಪೆಕ್ಟರ್ (ಸಿಐ) ಮಾ.15 ರಂದು ದಂಪತಿಯನ್ನು ಪತ್ತೆಹಚ್ಚಿ, ಮನೆಗೆ ಹಿಂದಿರುಗುವಂತೆ ಒತ್ತಾಯಿಸಿದರು.
ಮೂರು ದಿನಗಳ ಬಳಿಕ ಪೋಷಕರ ಮನೆಯಲ್ಲಿ ಆಕೆ ಶವವಾಗಿ ಪತ್ತೆಯಾಗಿದ್ದು, ಕುಟುಂಬಸ್ಥರು ಆರಂಭದಲ್ಲಿ ಇದನ್ನು ಆತ್ಮಹತ್ಯೆ ಎಂದು ಹೇಳಿದ್ದರೂ, ಬಳಿಕ ಪೊಲೀಸ್ ಅಧಿಕಾರಿಯ ಸಹಾಯದಿಂದ ಅದನ್ನು ಆತ್ಮಹತ್ಯೆ ಪ್ರಕರಣವೆಂದು ಮುಚ್ಚಿಹಾಕಲು ಕುಟುಂಬಸ್ಥರು ಪ್ರಯತ್ನಿಸಿದ್ದರು. ಆದರೆ, ಮರಣೋತ್ತರ ಪರೀಕ್ಷೆಯಲ್ಲಿ ಮಹಿಳೆಯ ಸಾವು ಆತ್ಮಹತ್ಯೆಯಲ್ಲ, ಕೊಲೆ ಎಂದು ಸಾಬೀತಾಗಿತ್ತು. ಆಕೆ ಮಲಗಿದ್ದಾಗ ದಿಂಬಿನಿಂದ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ಸಂಬಂಧ ಮೃತ ಮಹಿಳೆಯ ತಂದೆ ಚಂದ್ರಶ್ರೀನು ಮತ್ತು ಇನ್ನೊಬ್ಬ ಸಂಬಂಧಿಯನ್ನು ಬಂಧಿಸಲಾಗಿದೆ. ಅಧಿಕಾರಿಗಳು ಈಗ ಕುಟುಂಬದ ಬ್ಯಾಂಕ್ ದಾಖಲೆಗಳು ಮತ್ತು ನಗದು ವಹಿವಾಟುಗಳನ್ನು ಪರಿಶೀಲಿಸಿದ್ದು, ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ತಪ್ಪಿತಸ್ಥರೆಂದು ಸಾಬೀತಾದರೆ ಅವರ ಮೇಲೆ ಕ್ರಿಮಿನಲ್ ಆರೋಪಗಳನ್ನು ಎದುರಿಸಬೇಕಾಗುತ್ತದೆ. ತನಿಖೆ ಮುಂದುವರೆದಿದೆ.






