ಯುವಜನ

10ನೇ ತರಗತಿ ವಿದ್ಯಾರ್ಥಿ ಸಂಕೇತ್ ಸಮಾಧಿ ಧ್ವಂಸಗೊಳಿಸಿದ ಕಿಡಿಗೇಡಿಗಳು

Views: 103

ಕನ್ನಡ ಕರಾವಳಿ ಸುದ್ದಿ: ಶಿವಮೊಗ್ಗ ಜಿಲ್ಲೆಯ ಸೂಳೆಬೈಲು ಬಡಾವಣೆ ನಿವಾಸಿ ಎಸ್ಎಸ್ಎಲ್ಸಿ ವಿದ್ಯಾರ್ಥಿ ಸಂಕೇತ್ ಕೊಲೆ ಕೇಸ್‌ಗೆ ಸಂಬಂಧಿಸಿದಂತೆ ಮತ್ತೊಂದು ಬೆಳವಣಿಗೆ ನಡೆದಿದ್ದು, ಪೋಷಕರು ಆತಂಕಕ್ಕೀಡಾಗಿದ್ದಾರೆ. ಜಗಳ ಬಿಡಸಲು ಹೋದ ಅಮಾಯಕ ಬಾಲಕ ಸಂಕೇತ್ನನ್ನ ಕಿಡಿಗೇಡಿ ಯುವಕರು ಹತ್ಯೆ ಮಾಡಿದ್ದರು. ಇದೀಗ ಆತನ ಸಮಾಧಿ ಸಿದ್ಧಪಡಿಸಿ ಎರಡು ದಿನಗಳ ಬಳಿಕ ಆತನ ಸಮಾಧಿಯನ್ನು ಕಿಡಿಗೇಡಿಗಳು ಧ್ವಂಸ ಮಾಡಿದ್ದಾರೆ.

ಫೆ. 23 ರಂದು ವಿದ್ಯಾರ್ಥಿ ಸಂಕೇತ್‌ ಹತ್ಯೆಯಾಗಿತ್ತು. ಬಳಿಕ ಸಮೀಪದ ಗುಡ್ಡೆಮರಡಿಯ ಹಿಂದೂ ರುದ್ರಭೂಮಿಯಲ್ಲಿ ಸಂಕೇತ್‌ನ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು. ಕಳೆದೆರೆಡು ದಿನಗಳ ಹಿಂದೆಯಷ್ಟೇ, ಆತನ ಸಮಾಧಿಗೆ ಕಟ್ಟೆ ನಿರ್ಮಿಸಿ ಫೋಟೋ ಸಹ ಅಳವಡಿಸಲಾಗಿತ್ತು. ಮಂಗಳವಾರ ಸಂಜೆ ಸಮಾಧಿಯ ಒಂದು ಭಾಗ ಒಡೆದಿರುವುದು ಗೊತ್ತಾಗಿದೆ. ಇದರಿಂದ ಬೇಸರ ಮತ್ತು ಆಕ್ರೋಶಗೊಂಡ ಸಂಕೇತ್‌ನ ಪೋಷಕರು ತುಂಗಾ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಸಂಕೇತ್ ಸಮಾಧಿಯನ್ನು ಕಲ್ಲಿನಿಂದ ಜಜ್ಜಿದ್ದಾರೆ. ಹಿಂದೆ ಹಾಕಿದ್ದ ಗ್ರಾನೈಟ್ ಒಡೆದು ಹಾಕಿದ್ದಾರೆ. ಪ್ರತಿದಿನ ಸಂಜೆ ಸಮಾಧಿ ಸ್ಥಳಕ್ಕೆ ಹೋಗಿ ಪೋಷಕರು ಪೂಜೆ ಮಾಡಿ ಬರುತ್ತಿದ್ದರು. ಮುಂಭಾಗದಲ್ಲಿ ದೀಪ ಇಡಲು ವ್ಯವಸ್ಥೆ ಮಾಡಿದ್ದರು. ಆದರೆ ಕಿರಾತಕರು ಅದನ್ನು ಒಡೆದು ಹಾಕಿದ್ದಾರೆ.

ಏನಿದು ಪ್ರಕರಣ?

ಶಿವಮೊಗ್ಗದಲ್ಲಿ ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆ ವಿಕೋಪಕ್ಕೆ ಹೋಗಿ, ವಿದ್ಯಾರ್ಥಿ ಸಂಕೇತ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಲಾಗಿತ್ತು. ಈ ಘಟನೆಯು ಸ್ಥಳೀಯರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಕಾನೂನು ಸುವ್ಯವಸ್ಥೆಯ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ನಗರದಲ್ಲಿ 10ನೇ ತರಗತಿ ವಿದ್ಯಾರ್ಥಿ ಸಂಕೇತ್ ಕೊಲೆ ಪ್ರಕರಣ ರಾಜ್ಯಾದ್ಯಂತ ಸಂಚಲನ ಮೂಡಿಸಿತ್ತು. ಬಳಿಕ ಅಪ್ರಾಪ್ತರು ಸೇರಿ ಹಲವರನ್ನು ಬಂಧಿಸಲಾಗಿತ್ತು.

Related Articles

Back to top button
error: Content is protected !!