ಪುರಿ ಜಗನ್ನಾಥನ ಸನ್ನಿಧಿಯಲ್ಲಿ ಪವಾಡ! ಮಗನ ಪ್ರಾಣಕ್ಕಾಗಿ ತಂದೆಯ ಆಕ್ರಂದನ, ಕಣ್ಣುಬಿಟ್ಟ ಬಾಲಕ!
Views: 90
ಕನ್ನಡ ಕರಾವಳಿ ಸುದ್ದಿ: ರಾಜಸ್ಥಾನ ಮೂಲದ ಪ್ರಕಾಶ್ ಭೋಯ್ ಎಂಬುವವರ ಬದುಕು ಒಂದು ಭೀಕರ ಅಪಘಾತದಿಂದ ಕತ್ತಲಾಗಿ ಹೋಗಿತ್ತು. ಪ್ರೀತಿಯ ಮಗ ನಿಖಿಲ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು, ಕೋಮಾ ಸ್ಥಿತಿಗೆ ಜಾರಿದ್ದ. ಕೈಲಿದ್ದ ಹಣವೆಲ್ಲಾ ಮಗನ ಚಿಕಿತ್ಸೆಗೆ ಸುರಿದು ಬೇಸತ್ತು ಹೋಗಿದ್ದರು. ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಹಣ ಬೇಕೆಂದಾಗ, ದಿಕ್ಕುಗಾಣದ ಆ ತಂದೆ ಕೊನೆಯದಾಗಿ ಆಶ್ರಯಿಸಿದ್ದು “ಜಗತ್ತಿನ ಒಡೆಯ” ಜಗನ್ನಾಥನನ್ನು.
ಜೀವವಿದ್ದರು ಇಲ್ಲದಂತೆ ಮಲಗಿದ್ದ ಮಗನನ್ನು ಕೈಗಳಲ್ಲಿ ಹೊತ್ತುಕೊಂಡು ಪ್ರಕಾಶ್ ಭೋಯ್ ಶ್ರೀಮಂದಿರದ ಸಿಂಹದ್ವಾರಕ್ಕೆ ಬಂದಾಗ ಅಲ್ಲಿನ ವಾತಾವರಣವೇ ಸ್ತಬ್ಧವಾಗಿತ್ತು. ಮಗನ ಪರಿಸ್ಥಿತಿ ಕಂಡ ಭದ್ರತಾ ಸಿಬ್ಬಂದಿ ಕರಗಿ ಹೋಗಿ, ಗರ್ಭಗುಡಿಯತ್ತ ಬಿಟ್ಟರು. ತಂದೆಯ ಕಣ್ಣೀರು ದೇಗುಲದ ಕಲ್ಲುಗಳನ್ನು ಕರಗಿಸುವಂತಿತ್ತು. “ನಮಗೆಲ್ಲ ತಂದೆ ನೀನೇ.. ಕಾಯುವವನೂ ನೀನೇ.. ನನ್ನ ಮಗನನ್ನು ನನಗೆ ಮರಳಿಸು” ಎಂದು ಜಗನ್ನಾಥನ ಮುಂದೆ ಗೋಳಾಡುತ್ತಿದ್ದರೆ, ಅಲ್ಲಿದ್ದ ಇತರ ಭಕ್ತರ ಕಣ್ಣಾಲಿಗಳೂ ಕಂಬನಿ ಮಿಡಿಯುತ್ತಿದ್ದವು.
ಪ್ರಕಾಶ್ ಮಗನನ್ನು ದೇವರ ಮುಂದೆ ಮಲಗಿಸಿ ಪ್ರಾರ್ಥಿಸುತ್ತಿದ್ದಂತೆ ಒಂದು ವಿಸ್ಮಯ ಸಂಭವಿಸಿದೆ. ದಿನಗಳಿಂದ ಕೋಮಾದಲ್ಲಿದ್ದ ಮಗ ನಿಖಿಲ್, ಇದ್ದಕ್ಕಿದ್ದಂತೆ ತನ್ನ ತಲೆಯನ್ನು ಅಕ್ಕಪಕ್ಕಕ್ಕೆ ಆಡಿಸಿ ಕಣ್ಣು ಬಿಟ್ಟಿದ್ದಾನೆ. ಈ ದೃಶ್ಯ ಕಂಡ ಭಕ್ತರು “ಜೈ ಜಗನ್ನಾಥ” ಎಂದು ಘೋಷಣೆ ಕೂಗಿದರು. ಒಬ್ಬ ಅಸಹಾಯಕ ತಂದೆಯ ಪ್ರಾರ್ಥನೆ ಜಗನ್ನಾಥನಿಗೆ ತಲುಪಿತು ಎಂದು ಜನ ಭಾವಪರವಶರಾದರು.
“ನನ್ನ ಮಗ ಕಣ್ಣುಬಿಟ್ಟಿರುವುದು ನನಗೆ ಹೊಸ ಚೇತರಿಕೆ ನೀಡಿದೆ. ಆತನ ಸಂಪೂರ್ಣ ಚಿಕಿತ್ಸೆಗೆ ಹಣವಿಲ್ಲದೆ ನಾನು ಸೋತಿದ್ದೇನೆ. ಒಡಿಶಾ ಸರ್ಕಾರ ಅಥವಾ ಪುರಿ ಆಡಳಿತ ಮಂಡಳಿ ನನ್ನ ಕೈ ಹಿಡಿದರೆ ಮಗನನ್ನು ಉಳಿಸಿಕೊಳ್ಳಬಲ್ಲೆ” ಎಂದು ಪ್ರಕಾಶ್ ಭೋಯ್ ಕಣ್ಣೀರು ಹಾಕುತ್ತಾ ಮನವಿ ಮಾಡಿದ್ದಾರೆ. ದೇವರ ಮೇಲಿನ ನಂಬಿಕೆ ಆ ಮಗುವನ್ನು ಕಣ್ಣುಬಿಡುವಂತೆ ಮಾಡಿದೆ, ಈಗ ಮಾನವೀಯತೆಯ ರೂಪದಲ್ಲಿ ಆ ಮಗುವಿಗೆ ಚಿಕಿತ್ಸೆ ದೊರೆಯಬೇಕಿದೆ.






