ಮಾದಕ ದ್ರವ್ಯ ನೀಡಿ,ಮಾಟ-ಮಂತ್ರಗಳ ಭಯ ಹುಟ್ಟಿಸಿ ಅತ್ಯಾಚಾರ ಎಸಗುತ್ತಿದ್ದ ಕುಖ್ಯಾತ ಜ್ಯೋತಿಷಿ ಬಂಧನ
Views: 100
ಕನ್ನಡ ಕರಾವಳಿ ಸುದ್ದಿ: ಜ್ಯೋತಿಷ್ಯ ಮತ್ತು ಆಧ್ಯಾತ್ಮದ ಮುಖವಾಡ ಧರಿಸಿ ಮಹಿಳೆಯರನ್ನು ಅತ್ಯಾಚಾರ ಎಸಗುತ್ತಿದ್ದ ಮಹಾರಾಷ್ಟ್ರದ ಕುಖ್ಯಾತ ಜ್ಯೋತಿಷಿ ಅಶೋಕ್ ಖಾರತ್‌ನನ್ನು (67) ಪೊಲೀಸರು ಬಂಧಿಸಿದ್ದಾರೆ.
ಈತನ ಕೃತ್ಯಗಳು ಕೇವಲ ಒಬ್ಬ ಮಹಿಳೆಗೆ ಸೀಮಿತವಾಗಿಲ್ಲ, ಈತ ಬರೊಬ್ಬರಿ 58 ಮಹಿಳೆಯರನ್ನು ಲೈಂಗಿಕವಾಗಿ ಶೋಷಿಸಿರುವ ಆಘಾತಕಾರಿ ಮಾಹಿತಿ ತನಿಖೆಯಲ್ಲಿ ಬಯಲಾಗಿದೆ.
35 ವರ್ಷದ ಮಹಿಳೆಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಹಗರಣ ಬೆಳಕಿಗೆ ಬಂದಿದೆ. ದೂರುದಾರ ಮಹಿಳೆಯ ಮೇಲೆ ಧಾರ್ಮಿಕ ವಿಧಿವಿಧಾನಗಳ ಹೆಸರಿನಲ್ಲಿ ಮಾದಕ ದ್ರವ್ಯ ನೀಡಿ, ವಿದ್ಯೆ ಬಳಸಿ ಅತ್ಯಾಚಾರ ಎಸಗಲಾಗಿತ್ತು. ತನಿಖೆ ನಡೆಸಿದ ನಾಸಿಕ್ ಕ್ರೈಂ ಬ್ರಾಂಚ್ ಪೊಲೀಸರಿಗೆ ಜ್ಯೋತಿಷಿಯ ಕಚೇರಿಯಲ್ಲಿ ಅಡಗಿಸಿಟ್ಟಿದ್ದ ಸಿಸಿಟಿವಿ ಕ್ಯಾಮೆರಾ ಮತ್ತು ಪೆನ್ ಡ್ರೈವ್‌ಗಳು ಸಿಕ್ಕಿವೆ. ಈ ಪೆನ್ ಡ್ರೈವ್‌ನಲ್ಲಿ 58 ಮಹಿಳೆಯರ ಮೇಲೆ ಈತ ಎಸಗಿರುವ ಲೈಂಗಿಕ ದೌರ್ಜನ್ಯದ ವೀಡಿಯೊ ಕ್ಲಿಪ್‌ಗಳಿವೆ!
ಮರ್ಚೆಂಟ್ ನೇವಿಯ ನಿವೃತ್ತ ಅಧಿಕಾರಿಯಾಗಿರುವ ಅಶೋಕ್ ಖಾರತ್ ತನ್ನನ್ನು ತಾನು ‘ಕ್ಯಾಪ್ಟನ್’ ಎಂದು ಕರೆದುಕೊಳ್ಳುತ್ತಿದ್ದ. ನಾಸಿಕ್‌ನ ಪ್ರತಿಷ್ಠಿತ ಕೆನಡಾ ಕಾರ್ನರ್‌ನಲ್ಲಿ ‘ಓಕಸ್ ಪ್ರಾಪರ್ಟಿ ಡೀಲರ್ಸ್’ ಎಂಬ ರಿಯಲ್ ಎಸ್ಟೇಟ್ ಕಚೇರಿ ತೆರೆದಿದ್ದ. ಇದು ಕೇವಲ ಒಂದು ಮುಖವಾಡವಾಗಿತ್ತು. ಇಲ್ಲಿಗೆ ಸಮಸ್ಯೆಗಳ ಪರಿಹಾರಕ್ಕಾಗಿ ಬರುವ ಮಹಿಳೆಯರನ್ನು ತನ್ನ ಬಲೆಗೆ ಬೀಳಿಸಿಕೊಳ್ಳುತ್ತಿದ್ದ ಈತ, ‘ನಿಮ್ಮ ಪತಿ ಸತ್ತು ಹೋಗುತ್ತಾರೆ’ ಅಥವಾ ‘ನಿಮ್ಮ ಕುಟುಂಬಕ್ಕೆ ಕೇಡಾಗುತ್ತದೆ’ ಎಂದು ಮಾಟ-ಮಂತ್ರಗಳ ಭಯ ಹುಟ್ಟಿಸಿ ಅತ್ಯಾಚಾರ ಎಸಗುತ್ತಿದ್ದ ಎನ್ನಲಾಗಿದೆ.
ದೇವಮಾನವನ ಸೋಗಿನಲ್ಲಿ ಮಹಿಳೆಯರ ಬದುಕನ್ನು ನರಕವಾಗಿಸಿದ ಈ ‘ಕ್ಯಾಪ್ಟನ್’ ಈಗ ಜೈಲು ಕಂಬಿ ಎಣಿಸುತ್ತಿದ್ದಾನೆ.






