ಈ ಜಿಲ್ಲೆಗಳಲ್ಲಿ ಭರ್ಜರಿ ಮಳೆ ಮುನ್ಸೂಚನೆ:ಎಲ್ಲೆಲ್ಲಿ ಯೆಲ್ಲೋ ಅಲರ್ಟ್?
Views: 145
ಕನ್ನಡ ಕರಾವಳಿ ಸುದ್ದಿ: ಹವಾಮಾನ ಇಲಾಖೆಯು ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಗುಡುಗು ಸಹಿತ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದ್ದು, ‘ಯೆಲ್ಲೋ ಅಲರ್ಟ್’ ಘೋಷಿಸಿದೆ.
ಕಳೆದ ಕೆಲವು ದಿನಗಳಿಂದ ಬೆಂಗಳೂರು ನಗರ, ಚಾಮರಾಜನಗರ, ಬೆಳಗಾವಿ ಹಾಗೂ ಧಾರವಾಡ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆಯಾಗಿದೆ.
ಬೇಸಿಗೆಯ ಸುಡುವ ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ಈ ಅಕಾಲಿಕ ಮಳೆ ಸಮಾಧಾನ ತಂದಿದ್ದರೂ, ರೈತರ ಬೆಳೆಗಳಿಗೆ ಕೆಲವು ಕಡೆ ಹಾನಿಯುಂಟಾದ ಆತಂಕವೂ ಎದುರಾಗಿದೆ.
ಎಲ್ಲೆಲ್ಲಿ ಯೆಲ್ಲೋ ಅಲರ್ಟ್?
ಹವಾಮಾನ ಇಲಾಖೆಯ ವರದಿಯ ಪ್ರಕಾರ, ಕರಾವಳಿ ಕರ್ನಾಟಕದ ಜಿಲ್ಲೆಗಳು ಸೇರಿದಂತೆ ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ನಾಳೆ ಮತ್ತು ನಾಡಿದ್ದು ಈ ಕೆಳಗಿನ ಜಿಲ್ಲೆಗಳಿಗೆ ಮಳೆಯ ಎಚ್ಚರಿಕೆ ನೀಡಲಾಗಿದೆ:
ಉತ್ತರ ಕರ್ನಾಟಕ: ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಬೆಳಗಾವಿ, ಧಾರವಾಡ.
ಮಲೆನಾಡು ಹಾಗೂ ಕರಾವಳಿ: ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು.
ದಕ್ಷಿಣ ಒಳನಾಡು: ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ಚಾಮರಾಜನಗರ, ತುಮಕೂರು, ದಾವಣಗೆರೆ.
ಆಗ್ನೇಯ ಅರೇಬಿಯನ್ ಸಮುದ್ರ ಮತ್ತು ಲಕ್ಷದ್ವೀಪ ಪ್ರದೇಶದ ಮೇಲೆ ಚಂಡಮಾರುತದ ಪರಿಚಲನೆ ಗೋಚರಿಸುತ್ತಿದೆ. ಇದರ ಪ್ರಭಾವದಿಂದಾಗಿ ಪಶ್ಚಿಮ ಘಟ್ಟಗಳು ಹಾಗೂ ಕರ್ನಾಟಕದ ಒಳನಾಡಿನ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ ಎಂದು ಹವಾಮಾನ ತಜ್ಞರು ವಿಶ್ಲೇಷಿಸಿದ್ದಾರೆ.
ಮುಂದಿನ ಎರಡು ದಿನಗಳ ಕಾಲ ಈ ಜಿಲ್ಲೆಗಳಲ್ಲಿ ಬಲವಾದ ಗಾಳಿ ಬೀಸಲಿದ್ದು, ಗುಡುಗು ಮತ್ತು ಮಿಂಚಿನೊಂದಿಗೆ ಆಲಿಕಲ್ಲು ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ಸಾರ್ವಜನಿಕರು ಮಳೆ ಮತ್ತು ಮಿಂಚಿನ ಸಂದರ್ಭದಲ್ಲಿ ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯುವಂತೆ ಹಾಗೂ ಮರದ ಕೆಳಗೆ ನಿಲ್ಲದಂತೆ ಇಲಾಖೆ ಸೂಚನೆ ನೀಡಿದೆ.






