ಚಿತ್ರಕಥೆ, ನಿರ್ದೇಶಕ ಕೆ.ಧನಂಜಯ ಶೆಟ್ಟಿಗಾರ್ “ಅಂತರ್ಯಾಮಿ” ಚಲನಚಿತ್ರ ಮಾ.6 ರಂದು ರಾಜ್ಯಾದ್ಯಂತ ಬೆಳ್ಳಿತೆರೆಗೆ
Views: 157
ಕನ್ನಡ ಕರಾವಳಿ ಸುದ್ದಿ: ಉಡುಪಿ ಜಿಲ್ಲೆಯ ಸಾಸ್ತಾನ ಮೂಲದ ಮಂಡ್ಯದ ನಿವಾಸಿ ಕೆ. ಧನಂಜಯ್ ಶೆಟ್ಟಿಗಾರ್ ಅವರ ಚಿತ್ರಕಥೆ, ನಿರ್ದೇಶನದ ಗುರುರೇಣುಕಾ ಪ್ರೊಡಕ್ಷನ್ ತುಮಕೂರು ಅವರ “ಅಂತರ್ಯಾಮಿ” ಚಲನಚಿತ್ರ ಮಾರ್ಚ್ 6 ರಂದು ಬೆಳ್ಳಿ ತೆರೆಯಲ್ಲಿ ಪ್ರದರ್ಶನವಾಗಲಿದೆ ಎಂದು ಚಿತ್ರದ ನಿರ್ದೇಶಕ ಕೆ.ಧನಂಜಯ ತಿಳಿಸಿದರು.

ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ವಸ್ತು ಚಿತ್ರದ ವಿಷಯವಾಗಿದ್ದು, ಇಂದಿನ ಯುವ ಪೀಳಿಗೆ ಸಾಮಾಜಿಕ ಜಾಲತಾಣದ ಗೀಳಿಗೆ ಬಲಿಯಾಗುತ್ತಿರುವುದರ ಪರಿಣಾಮ, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಹೇಗೆ ಭಾರತದ ಭವಿಷ್ಯದ ಅಭಿವೃದ್ಧಿ ವ್ಯವಸ್ಥೆಗಳಿಗೆ ಮಾರಕವಾಗಿದೆ, ವಿದೇಶಗಳಿಗೆ ಹೇಗೆ ಪೂರಕವಾಗಿದೆ ಎಂಬುದರ ಜೊತೆಗೆ, ಯುವ ಜನತೆ ಜೊತೆಗೆ ಸಾಮಾನ್ಯ ಜನತೆ ಕೂಡ ಹೇಗೆ ಇದರ ಭಾಗವಾಗುತ್ತಿದ್ದಾರೆ, ಇದನ್ನು ನಾಯಕ ಹೇಗೆ ಸರಿಪಡಿಸುತ್ತಾನೆ ಎಂಬುದನ್ನು ಹಾಗೂ ಜೀವನದಲ್ಲಿ ವಿನ್ನರ್ ನ ಲೈಫ್‌ಗಿಂತ ರನ್ನರ್ ಅಥವಾ ಸೋತವರ ಜೀವನ ಎಷ್ಟು ಘೋರ ಎಂಬುದರ ಕಟುಸತ್ಯವನ್ನು ಚಿತ್ರದಲ್ಲಿ ತೋರಿಸಲಾಗಿದೆ ಎಂದರು.
25 ದಿನಗಳ ಕಾಲ ತುಮಕೂರು ಸಿದ್ದಗಂಗಾ ಮಠ, ಎಸ್.ಎಸ್.ಆಯ್.ಟಿ ಕಾಲೇಜ್, ಬಂಡೆಮಠ, ಸೋಮವಾರಪೇಟೆ, ಮಾದಾಪುರ,ಕುಶಾಲನಗರ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ಎಲ್ಲ ವಯೋಮಾನದವರಿಗೆ ಚಿತ್ರ ಇಷ್ಟವಾಗಲಿದೆ ಎಂದರು.

ಚಿತ್ರದಲ್ಲಿ ನಾಯಕ ನಟರಾಗಿ ಪ್ರಣವ್, ನಾಯಕಿಯಾಗಿ ಕನ್ನಡತಿ ಸೀರಿಯಲ್ ನ ಮೋಹಿರಾ ಆಚಾರ್ಯ, ಮಂಡ್ಯಸಿದ್ದು, ಕಾಮಿಡಿ ಕಿಲಾಡಿ ಉದಯ್, ಕಿಟ್ಟಿ, ಮಂಜಿವಾ, ಮುಗಿಲನ್, ಬೇಬಿ ಹಾನ್ಸಿ, ಬಾಲಕೃಷ್ಣ ಬರಗೂರು, ಹೇಮಾ ಮಾಲಿನಿ, ರೇಣುಕಾಂಬ , ರುದ್ರ ಮುನಿ,ಯೋಗೇಶ ಮೊದಲಾದವರಿದ್ದಾರೆ. ಛಾಯಾಗ್ರಹಣ ಎಸ್.ಬಾಲು, ವಿನಯ್ ಕಾವ್ಯ ಕಾಂತಿಯವರ ಸಾಹಿತ್ಯ, ನಾಲ್ಕು ಹಾಡುಗಳಿದ್ದು ಎಲ್ಲವೂ ಉತ್ತಮ ಸಾಹಿತ್ಯವನ್ನು ಹೊಂದಿದ್ದು ಉತ್ತಮ ಸಂಗೀತದೊಂದಿಗೆ ಮೂಡಿ ಬಂದಿದೆ ಎಂದರಲ್ಲದೇ ಹಾಡಿನ ತುಣುಕುಗಳನ್ನು ಪ್ರದರ್ಶಿಸಿದರು.
ಪೃಥ್ವಿ ಭಟ್, ಮೇಘನಾ ಕುಲಕರ್ಣಿ, ದೇಸಿ ಮೋಹನ್ ರವರು ಹಾಡುಗಳಿಗೆ ಧ್ವನಿ ನೀಡಿದ್ದಾರೆ. ಸಂಗೀತ ದೇಸಿ ಮೋಹನ್ ಸಂಕಲನ ಅರವಿಂದ್ ರಾಜ್, ನೃತ್ಯ ನಿರ್ದೇಶನ ಬಾಲು ಮಾಸ್ಟರ್, ತಾಂತ್ರಿಕ ಸಲಹೆ ಶ್ರೀಕಾಂತ್ ಶ್ರಾಫ್, ಡಿಆಯ್ ಚೆನೈ, ಬೆಂಗಳೂರ, ಪಿ.ಆರ್.ಓ ಎಂಜೆಎಸ್‌ಪಿಆರ್, ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ,ಡಾ.ವೀರೇಶ ಹಂಡಿಗಿ ಅವರದಿದೆ. ನಿರ್ದೇಶನ ತಂಡದಲ್ಲಿ ರವಿ ಶಂಕರ್‌ನಾಗ್, ಶರತ್ ಘಾಟಿ, ಮಂಜುನಾಥ್ ಹೊಸ ರಂಗಾಪುರ, ಮುಕುಂದ, ರಾಣಾ, ವಸಂತ್ ಇದ್ದಾರೆ ಎಂದು ವಿವರಿಸಿದರು.
ಗೋಷ್ಠಿಯಲ್ಲಿ ಚಿತ್ರ ತಂಡದ ಬಾಬುಪ್ರಸಾದ್ ,ಮುಕುಂದ, ಶಿವಕುಮಾರ್.ಎಸ್, ಯೋಗೇಶ್ ಹಾಗೂ ಸಾತನೂರು ರಾಣಾ ಇದ್ದರು.
ಚಿಕ್ಕವರಿಂದ ದೊಡ್ಡವರವರೆಗೂ ಮೊಬೈಲ್ ಗೀಳು ಇಂದು ಹಾಸುಕ್ಕಾಗಿದ್ದು ಮೊಬೈಲ್‌ನಲ್ಲಿ ಬರುವ ಕೆಲ ಕೆಟ್ಟ ವಿಚಾರಗಳಿಂದ ಜನರು ಹೇಗೆ ಹಾದಿ ತಪ್ಪುತ್ತಾರೆ ಇದಕ್ಕೆ ಮಾರ್ಗೋಪಾಯಗಳೇನು, ಇದರಿಂದ ದೂರ ಇರುವುದು ಹೇಗೆ ಎಂಬಂತಹ ಸಂದೇಶಗಳನ್ನು ತಮ್ಮ ಚಿತ್ರದ ಕಥಾ ಹಂದರದಲ್ಲಿ ಹುಡುಗಿಸಿಟ್ಟಿದ್ದು ಜನರು ಈ ಸಂದೇಶಗಳಿಂದ ಎಚ್ಚೆತ್ತುಕೊಂಡು, ಉತ್ತಮ ಮತ್ತು ಆರೋಗ್ಯಕರವಾದ ಸಮಾಜವನ್ನು ಕಟ್ಟಿಕೊಳ್ಳಬೇಕಾಗಿದೆ ಎಂದು ಚಿತ್ರ ತಂಡಕ್ಕೆ ಹರಸಿ ಆಶೀರ್ವಚನವಿತ್ತರು.






