ಮದುವೆಗೆ ಬಂದಿದ್ದ ಮಹಿಳೆ ನಾಪತ್ತೆ: ಬ್ಯಾಗ್, ಚಪ್ಪಲಿ, ಒಳ ಉಡುಪುಗಳು ಪತ್ತೆ, ತೀವ್ರ ಆತಂಕ..!
Views: 321
ಕನ್ನಡ ಕರಾವಳಿ ಸುದ್ದಿ: ಮದುವೆ ಸಮಾರಂಭಕ್ಕೆ ಬಂದಿದ್ದ ಮಹಿಳೆಯೊಬ್ಬರು ಸುಮಾರು 30 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣದೊಂದಿಗೆ ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನಲ್ಲಿ ನಡೆದಿದೆ.
ತುಮಕೂರು ಜಿಲ್ಲೆಯ ಕುಣಿಗಲ್ ಮೂಲದ ಪ್ರಿಯಾಂಕ (29) ಎಂಬುವವರು ಚಿಕ್ಕಮಗಳೂರಿನಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭವೊಂದಕ್ಕೆ ಆಗಮಿಸಿದ್ದರು. ಫೆಬ್ರವರಿ 12 ರಂದು ರಾತ್ರಿ 7-30 ರ ಸುಮಾರಿಗೆ ತಮ್ಮ ಕುಟುಂಬ ಸದಸ್ಯರಿಗೆ ಕರೆ ಮಾಡಿದ್ದ ಪ್ರಿಯಾಂಕ ತಮಗೆ ಯಾರೋ ಪರಿಚಯದವರು ಸಿಕ್ಕಿರುವುದಾಗಿ ತಿಳಿಸಿದ್ದರು. ಆ ಮಾತು ಮುಗಿಯುತ್ತಿದ್ದಂತೆಯೇ ಫೋನ್ ಸ್ವಿಚ್ ಆಫ್ ಆಗಿದೆ.
ನಿಗೂಢವಾಗಿ ನಾಪತ್ತೆಯಾದ ಬೆನ್ನಲ್ಲೇ ಈ ವಿಚಾರವಾಗಿ ದೂರು ಕೊಟ್ಟರೂ ಸಹ ಸ್ಪಂದಿಸಿದ ಅರೆಹಳ್ಳಿ ಮತ್ತು ಬೇಲೂರು ಪೊಲೀಸರ ವಿರುದ್ಧ ಸಂಬಂಧಿಕರು ಗಂಭೀರವಾಗಿ ಆರೋಪಿಸಿದ್ದಾರೆ. ಕುಟುಂಬಸ್ಥರು ಸ್ಥಳಕ್ಕೆ ಬಂದಾಗ ಅಲ್ಲಿ ಮಹಿಳೆಯ ಬ್ಯಾಗ್, ಚಪ್ಪಲಿ ಹಾಗೂ ಒಳ ಉಡುಪುಗಳು ಪತ್ತೆಯಾಗಿರುವುದು ತೀವ್ರ ಆತಂಕ ಹಾಗೂ ಅನುಮಾನಗಳಿಗೆ ಕಾರಣವಾಗಿದೆ.
ಮಹಿಳೆಯು ಸುಮಾರು 30 ಲಕ್ಷ ರೂಪಾಯಿ ಮೌಲ್ಯದ ಭಾರೀ ಪ್ರಮಾಣದ ಚಿನ್ನಾಭರಣಗಳನ್ನು ಧರಿಸಿದ್ದರು ಎಂದು ಹೇಳಲಾಗುತ್ತಿದೆ. ಒಡವೆಗಾಗಿ ದುಷ್ಕರ್ಮಿಗಳು ಮಹಿಳೆಯನ್ನ ಅಪಹರಿಸಿ, ಅತ್ಯಾಚಾರ ಎಸಗಿ ಕೊಲೆ ಮಾಡಿರಬಹುದು ಎಂದು ಕುಟುಂಬಸ್ಥರು ಗಂಭೀರವಾಗಿ ಆರೋಪಿಸಿದ್ದಾರೆ. ಪೊಲೀಸರು ಈಗ ತನಿಖೆ ಚುರುಕುಗೊಳಿಸಿದ್ದಾರೆ. ಹಾಸನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದೆ.






