ಮಹಾಶಿವರಾತ್ರಿ ಹಬ್ಬ– ಮಹತ್ವ ಮತ್ತು ಆಚರಣೆ
Views: 34
ಕನ್ನಡ ಕರಾವಳಿ ಸುದ್ದಿ: ಮಹಾ ಶಿವರಾತ್ರಿ ಶಿಶಿರ ಋತುವಿನ ಮಾಘ ಮಾಸದ ಕೃಷ್ಣಪಕ್ಷದ ಚತುರ್ದಶಿಯ ರಾತ್ರಿ ಕಾಲದಲ್ಲಿ ಶಿವರಾತ್ರಿ ಆಚರಣೆ ಮಾಡಲಾಗುತ್ತದೆ
ಶಿವರಾತ್ರಿಯ ದಿನ ಅಸಂಖ್ಯ ಭಕ್ತರು ಶಿವನನ್ನು ಭಜಿಸಿ, ಪೂಜಿಸಿ ಪುನೀತರಾಗುತ್ತಾರೆ. ಹಿಂದಿನ ದಿನದ ರಾತ್ರಿ ಪೂಜೆಯೇ ಶಿವನಿಗೆ ಅತ್ಯಂತ ಪ್ರಿಯ ಇದು ಶಿವರಾತ್ರಿ, ಶಿವನಿಗೆ ಪ್ರೀತಿಯಾಗಿರುವ ಬಿಲ್ವಪತ್ರೆಯನ್ನು ಅರ್ಪಿಸಿ, ಪೂಜಿಸಿದರೆ ಸಕಲ ಪಾಪಗಳು ಪರಿಹಾರವಾಗುತ್ತವೆ. ದಿನವಿಡೀ ಉಪವಾಸ ಮಾಡಿ, ರಾತ್ರಿ ಜಾಗರಣೆ ಮಾಡಿ ಶಿವನನ್ನು ಸ್ತುತಿಸಿದರೆ ಸಕಲ ಪಾಪಗಳು ದೂರವಾಗುತ್ತವೆ ಎಂಬ ನಂಬಿಕೆ.
ಶಿವರಾತ್ರಿ ಶಿವ ಪಾರ್ವತಿಯರ ವಿವಾಹ ಮಹೋತ್ಸವದ ದಿನ ಎಂದು ಪ್ರತೀತಿ ಪರ್ವತರಾಜನ ಮಗಳು ಪಾರ್ವತಿ ರಾತ್ರಿಯಿಡೀ ಶಿವನ ಧ್ಯಾನ ಮಾಡಿ ಸ್ತುತಿಸುತ್ತಾ ಮೆಚ್ಚಿಸಿ ಅವನನ್ನು ವಿವಾಹವಾಗುವುದರಲ್ಲಿ ಸಫಲಳಾಗುತ್ತಾಳೆ.
ಸಮುದ್ರ ಮಥನದ ಕಾಲದಲ್ಲಿ ಉದ್ಭವಗೊಂಡ ಹಾಲಾಹಲ, ದೇವತೆಗಳು ಮತ್ತು ರಾಕ್ಷಸರನ್ನು ಮಾತ್ರವಲ್ಲದೆ ಸಕಲ ಲೋಕಗಳನ್ನೂ ತಲ್ಲಣಗೊಳಿಸುತ್ತದೆ. ಆಗ ಶಿವನೇ ಆ ವಿಷವನ್ನು ಕುಡಿದುಬಿಡುತ್ತಾನೆ. ಕುಡಿದ ವಿಷ ಗಂಟಲಿನಿಂದ ಕೆಳಗಿಳಿಯದಂತೆ ಪಾರ್ವತಿ ರಾತ್ರಿಯಿಡೀ ತಡೆಹಿಡಿಯುತ್ತಾಳೆ ನಿದ್ದೆ ಮಾಡುವುದರಿಂದ ವಿಷ ಬೇಗನೇ ಕೆಲಸ ಮಾಡುತ್ತದೆಂಬ ಕಾರಣಕ್ಕೆ, ಶಿವನು ನಿದ್ದೆ ಮಾಡದಂತೆ ರಾತ್ರಿಯಿಡೀ ದೇವತೆಗಳು ಅವನ ಭಜನೆ ಮಾಡುತ್ತಾ ಜಾಗ್ರತರಾಗಿರುತ್ತಾರೆ ಎಂಬುದೂ ಒಂದು ನಂಬಿಕೆ
ಒಮ್ಮೆ ದೇವಲೋಕದಲ್ಲಿ ಬ್ರಹ್ಮ ಮತ್ತು ವಿಷ್ಣುವಿನ ನಡುವೆ ಯಾರು ಶ್ರೇಷ್ಠರು ಎಂಬ ವಿಷಯಕ್ಕೆ ವಾಗ್ವಾದ ನಡೆಯಿತು. ಅವರನ್ನು ಸಮಾಧಾನ ಮಾಡುವುದು ದುಸ್ತರ ಎಂದರಿತ ದೇವತೆಗಳು ಪರಮೇಶ್ವರನನ್ನು ಸಹಾಯ ಮಾಡುವಂತೆ ಕೇಳಿಕೊಂಡರು. ಆಗ ಶಿವ, ವಿಷ್ಣು ಮತ್ತು ಬ್ರಹ್ಮರ ನಡುವೆ ಅಗ್ನಿಸ್ತಂಭದ ರೂಪದಲ್ಲಿ ನಿಂತು ತನ್ನ ಮೂಲವನ್ನು ಕಂಡುಹಿಡಿಯುವಂತೆ ಹೇಳಿದ. ಆಗ ಹಂಸದ ರೂಪ ತಾಳಿದ ಬ್ರಹ್ಮ ಕಂಭದ ಶಿರವನ್ನು ಹುಡುಕಲು ಮೇಲ್ಮುಖವಾಗಿ ಸಾಗಿದರೆ, ವಿಷ್ಣು ವರಾಹವತಾರ ತಾಳಿ ಕಂಬದ ತಳವನ್ನು ನೋಡಲು ಪಾತಾಳಕ್ಕಿಳಿದ, ಆದರೆ ಇಬ್ಬರೂ ಕಂಬದ ತುದಿಯನ್ನು ಹುಡುಕಲು ವಿಫಲರಾದರು. ಆಗ ಬ್ರಹ್ಮ ಶಿವನ ಜಡೆಯಿಂದ ಬೀಳುತ್ತಿರುವ ಕೇತಕಿ ಪುಷ್ಪವನ್ನು ಕಂಡು, ನೀನು ಎಲ್ಲಿಂದ ಬೀಳುತ್ತಿರುವಿ ಎಂದು ಪ್ರಶ್ನಿಸಿದ ಕೇತಕಿ ಪುಷ್ಪತಾನು ಅಗ್ನಿಕಂಭದ ಶಿರದಿಂದ ಬೀಳುತ್ತಿದ್ದೇನೆ ಎಂದು ಹೇಳಿತು. ಬ್ರಹ್ಮ ಕೇತಕಿ ಪುಷ್ಪವನ್ನು ಹಿಡಿದುಕೊಂಡು ಶಿವನ ಬಳಿಗೆ ಬಂದು, ಅಗ್ನಿ ಕಂಭದ ಶಿರವನ್ನು ನೋಡಿ ಅಲ್ಲಿಂದ ಆ ಪುಷ್ಪವನ್ನು ತಂದಿರುವುದಾಗಿ ಹೇಳಿದ, ಶಿವನಿಗೆ ಬ್ರಹ್ಮ ಮಾಡಿದ ಮೋಸದ ಅರಿವಾಗುತ್ತದೆ. ಕೋಪಗೊಂಡ ಪರಮಶಿವ, ಬ್ರಹ್ಮನನ್ನು ಯಾರೂ ಪೂಜಿಸಬಾರದೆಂದು ಶಾಪ ನೀಡಿ, ಶಿವಲಿಂಗ ರೂಪ ತಾಳಿದ ಶಿವ ಲಿಂಗರೂಪ ತಾಳಿದ ಮಾಘ ಮಾಸದ ಬಹುಳ ಚತುರ್ದಶಿಯಂದು ಶಿವರಾತ್ರಿ ಆಚರಣೆ ಮಾಡಲಾಗುತ್ತದೆ.
ಮದುವೆಯಾಗದ ಹೆಣ್ಣುಮಕ್ಕಳು ಶಿವರಾತ್ರಿಯಂದು ಶಿವನನ್ನು ಪೂಜಿಸಿ, ಅನುರೂಪ ಪತಿಯನ್ನು ಬೇಡಿಕೊಂಡರೆ ಅವರ ಇಷ್ಟಾರ್ಥ ಸಿದ್ಧಿಯಾಗುವುದೆಂಬ ನಂಬಿಕೆಯಿದೆ.
ಚಳಿಗಾಲ ಮುಗಿದು, ಬೇಸಿಗೆ ಪ್ರಾರಂಭವಾಗುವ ಈ ಸಂಧಿಕಾಲವನ್ನು ವಿಶೇಷವಾಗಿ ಅರ್ಥೈಸಿಕೊಳ್ಳುವುದೂ ಶಿವರಾತ್ರಿಯ ಇನ್ನೊಂದು ವಿಶೇಷ.

ನಮ್ಮ ಊರಿನಲ್ಲಿ ಉಪವಾಸ ಮಾಡಿ, ರಾತ್ರಿ ಮನೆಗಳಿಗೆ ಮಣ್ಣಿನ ಸೆಟ್ಟೆ ಬಿಸಾಡಿ ಬೈಸಿಕೊಳ್ಳುವುದು, ಉಪಯೋಗಿಸುವ ವಸ್ತುಗಳನ್ನು ಕಾಣದಂತೆ ಕದ್ದುಕೊಂಡು ಹೋಗಿ ದೂರ ಬಿಸಾಡುವುದು, ಬೆಂಕಿಗೆ ಹಾಕಿ ಸುಡುವುದು ಮುಂತಾದ ರಿವಾಜುಗಳು ಇವೆ. ಈ ಹಬ್ಬಕ್ಕೆ ಹಣಬಿನ ಹಬ್ಬ, ದಿಂಸಾಲ್ ಹಬ್ಬ ಎಂದೂ ಕರೆಯುತ್ತಾರೆ.
ಶಿವರಾತ್ರಿಯಂದು ಜಾಗರಣೆ ಮಾಡಿ ಶಿವನ ಆರಾಧನೆ ಮಾಡಿದರೆ ಶ್ರೇಯಸ್ಸಾಗುವುದೆಂದು ಭಕ್ತರು ನಂಬುತ್ತಾರೆ. ಇದರಿಂದ ಮನಸ್ಸಿಗೆ ನೆಮ್ಮದಿ ಸಿಗುವುದಂತೂ ಸತ್ಯ.
——ನಾರಾಯಣ ಶೆಟ್ಟಿಗಾರ, ಬೆಂಗಳೂರು






