ಕೊಲ್ಲೂರು ಶ್ರೀ ಮೂಕಾಂಬಿಕೆಗೆ ವಿಶೇಷ ಪೂಜೆ ಸಲ್ಲಿಸಿ,ವಿಜಯದ ಸಂಕೇತವಾಗಿ 1.6 ಕೆಜಿ ತೂಕದ ಬೆಳ್ಳಿಯ ಖಡ್ಗ ಅರ್ಪಿಸಿದ ತಮಿಳುನಾಡು ಸಿಎಂ ವಿಜಯ್
Views: 109
ಕನ್ನಡ ಕರಾವಳಿ ಸುದ್ದಿ: ತಮಿಳುನಾಡಿನ ನೂತನ ಮುಖ್ಯಮಂತ್ರಿ ವಿಜಯ್ ಅವರು ಇಂದು ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ, ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ದೇವಿಗೆ ಭಕ್ತಿಪೂರ್ವಕವಾಗಿ ಬೆಳ್ಳಿಯ ಖಡ್ಗ ಅರ್ಪಿಸಿದರು.

ದೇವಸ್ಥಾನಕ್ಕೆ ಆಗಮಿಸಿದ ಅವರನ್ನು ದೇವಸ್ಥಾನದ ವ್ಯವಸ್ಥಾಪನ ಮಂಡಳಿಯ ಪದಾಧಿಕಾರಿಗಳು ಆತ್ಮೀಯವಾಗಿ ಸ್ವಾಗತಿಸಿದರು.ಬಳಿಕ ಮೂಕಾಂಬಿಕಾ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ದೇವರ ದರ್ಶನದ ವೇಳೆ ಭಕ್ತರ ಸಂಚಾರವನ್ನು ನಿಯಂತ್ರಿಸಿ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿತ್ತು.
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಮಂಡಳಿಯಿಂದ ಸಿಎಂಗೆ ಗೌರವ ಅರ್ಪಣೆ ಸಲ್ಲಿಸಲಾಯಿತು.
ವಿಜಯ್ ಭೇಟಿಯ ಹಿನ್ನೆಲೆಯಲ್ಲಿ ದೇವಸ್ಥಾನದ ಪರಿಸರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಭದ್ರತಾ ದೃಷ್ಟಿಯಿಂದ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ದೇವಸ್ಥಾನಕ್ಕೆ ಆಗಮಿಸುವ ಮಾರ್ಗಗಳಲ್ಲಿಯೂ ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು.
ದೇವಸ್ಥಾನದ ಆವರಣದಲ್ಲಿ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದರು. ಸಿಎಂ ವಿಜಯ್ ಅವರನ್ನು ಕಂಡು ಅವರು ಸಂಭ್ರಮಿಸಿದರು.

ಬೆಳ್ಳಿಯ ಖಡ್ಗ ಸಮರ್ಪಣೆ
ವಿಜಯದ ಸಂಕೇತವಾಗಿ ದೇವಿಗೆ 1.6 ಕೆಜಿ ತೂಕದ ಬೆಳ್ಳಿಯ ಖಡ್ಗವನ್ನು ಕಾಣಿಕೆಯಾಗಿ ಅರ್ಪಿಸಿದರು.ದೇವಿಗೆ ಬೆಳ್ಳಿ ಖಡ್ಗವನ್ನು ಸಮರ್ಪಿಸಿದ ಅವರು, ಈ ಖಡ್ಗವನ್ನು ನಿತ್ಯ ಪೂಜೆಯ ಸಮಯದಲ್ಲಿ ಬಳಸಬೇಕೆಂದು ದೇವಸ್ಥಾನದ ಅರ್ಚಕರಿಗೆ ವಿಶೇಷ ಮನವಿ ಮಾಡಿದರು.ದೇವಸ್ಥಾನದ ಶಿಷ್ಟಾಚಾರ ಸಾಂಪ್ರದಾಯಿಕ ಉಡುಗೆ ತೊಟ್ಟು ದೇವಸ್ಥಾನಕ್ಕೆ ಆಗಮಿಸಿದ ಅವರು ದೇವಿಯ ದರ್ಶನ ಪಡೆದು ಸಂಕಲ್ಪ ಪೂಜೆಯನ್ನು ನೆರವೇರಿಸಿದರು.






