ಹೊಸಕೋಟೆಯಲ್ಲಿ ಬೆಳ್ಳಂಬೆಳಿಗ್ಗೆ ಭೀಕರ ಅಪಘಾತ, ಸ್ಥಳದಲ್ಲೇ 7 ಮಂದಿ ನಿಧನ
Views: 65
ಕನ್ನಡ ಕರಾವಳಿ ಸುದ್ದಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನಲ್ಲಿ ಇಂದು ಬೆಳ್ಳಂಬೆಳಗ್ಗೆ ಸಂಭವಿಸಿದ ಭೀಕರ ಸರಣಿ ರಸ್ತೆ ಅಪಘಾತದಲ್ಲಿ 7 ಜನರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ನಡೆದಿದೆ.
ಕಾರು, ಟ್ಯಾಂಕರ್ ಮತ್ತು ಬೈಕ್ ನಡುವೆ ಈ ಅಪಘಾತ ಸಂಭವಿಸಿದೆ. ಹೊಸಕೋಟೆ ತಾಲೂಕಿನ ಎಂ.ಸತ್ಯಾವರ ಬಳಿ ಈ ದುರಂತ ನಡೆದಿದೆ, ಪ್ರತ್ಯಕ್ಷದರ್ಶಿಗಳ ಮಾಹಿತಿ ಮತ್ತು ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಮೊದಲು ವೇಗವಾಗಿ ಬಂದ ಟ್ಯಾಂಕರ್ ಬೈಕ್ ಒಂದಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಟ್ಯಾಂಕರ್ ನ ಚಾಸಿ ಕಟ್ ಆಗಿದೆ. ಚಾಸಿ ತುಂಡಾಗುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿದ ಟ್ಯಾಂಕರ್, ನೇರವಾಗಿ ಎದುರಿಗೆ ಬರುತ್ತಿದ್ದ ಕಾರಿಗೆ ಗುದ್ದಿದೆ. ಡಿಕ್ಕಿಯ ಹೊಡೆತ ಎಷ್ಟು ಭಯಂಕರವಾಗಿತ್ತೆಂದರೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.
ಘಟನೆಯಲ್ಲಿ ಕಾರಿನಲ್ಲಿದ್ದ 6 ಜನರು ಮತ್ತು ಬೈಕ್ ಸವಾರ ಸೇರಿದಂತೆ ಒಟ್ಟು 7 ಮಂದಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಮೃತದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ದೃಶ್ಯ ಮನಕಲಕುವಂತಿತ್ತು. ಕಾರಿನಲ್ಲಿದ್ದವರು ಕೋಲಾರ ಮೂಲದವರು ಎಂದು ತಿಳಿದುಬಂದಿದೆ. ಇವರು ಕೋಲಾರದಿಂದ ದೇವನಹಳ್ಳಿ ಕಡೆಗೆ ಪ್ರಯಾಣ ಬೆಳೆಸಿದ್ದರು. ಹೊಸಕೋಟೆಯಿಂದ ದೇವನಹಳ್ಳಿ ಮಾರ್ಗದಲ್ಲಿ ಹೋಗುವಾಗ ಎಂ.ಸತ್ಯಾವರ ಬಳಿ ಈ ದುರಂತ ಸಂಭವಿಸಿದೆ.
ವಿಷಯ ತಿಳಿದ ತಕ್ಷಣ ಹೊಸಕೋಟೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಶವಾಗಾರಕ್ಕೆ ರವಾನಿಸಿದ್ದಾರೆ. ಅಪಘಾತದಿಂದಾಗಿ ಕೆಲಕಾಲ ಸಂಚಾರ ದಟ್ಟಣೆ ಉಂಟಾಗಿತ್ತು. ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.






