ಖ್ಯಾತ ಧಾರ್ಮಿಕ ಪ್ರಚಾರಕಿ ಸಾದ್ವಿ ಪ್ರೇಮ್ ಬೈಸಾ ಆಶ್ರಮದಲ್ಲಿ ಕುಸಿದು ಬಿದ್ದು ನಿಗೂಢ ಸಾವು
Views: 101
ಕನ್ನಡ ಕರಾವಳಿ ಸುದ್ದಿ: ಕಳೆದ ವರ್ಷ ವಿವಾದವೊಂದರಲ್ಲಿ ಸಿಲುಕಿಕೊಂಡಿದ್ದ ರಾಜಸ್ಥಾನದ 25 ವರ್ಷದ ಖ್ಯಾತ ಧಾರ್ಮಿಕ ಪ್ರಚಾರಕಿ ಸಾದ್ವಿ ಪ್ರೇಮ್ ಬೈಸಾ ಅವರು ಆಶ್ರಮದಲ್ಲಿ ಕುಸಿದು ಬಿದ್ದು ನಿಗೂಢವಾಗಿ ಸಾವಿಗೀಡಾಗಿದ್ದಾರೆ.
ಸಾಧ್ವಿ ಅವರು ಜ್ವರದಿಂದ ಬಳಲುತ್ತಿದ್ದರು ಮತ್ತು ಕಾಂಪೌಂಡರ್ ನೀಡಿದ ಇಂಜೆಕ್ಷನ್ ನಂತರ ಕುಸಿದು ಬಿದ್ದಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆದರೆ ಸಾದ್ವಿ ಮೃತಪಟ್ಟ ಕೆಲವು ಗಂಟೆಗಳ ನಂತರ ಅವರ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಆತ್ಮಹತ್ಯೆಯ ಪತ್ರದಂತಹ ಪೋಸ್ಟ್ ವೊಂದು ಕಾಣಿಸಿಕೊಂಡಿದೆ.
ಅದರಲ್ಲಿ ಅವರು “ಅಗ್ನಿಪರೀಕ್ಷೆ”ಯ ಬಗ್ಗೆ ಉಲ್ಲೇಖಿಸಿದ್ದಾರೆ. ತನಗೆ ಆ ಅವಕಾಶ ಸಿಗಲಿಲ್ಲ ಎಂದು ಹೇಳಿಕೊಂಡಿರುವ ಆಕೆ, ತಾನು ಮರಣ ಹೊಂದಿದ ನಂತರವಾದರೂ ನ್ಯಾಯ ಸಿಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
“ನಾನು ಪ್ರತಿ ಕ್ಷಣವನ್ನು ಸನಾತನದ ಪ್ರಚಾರಕ್ಕಾಗಿ ಜೀವಿಸಿದ್ದೇನೆ. ಈ ಜಗತ್ತಿನಲ್ಲಿ ಸನಾತನ ಧರ್ಮಕ್ಕಿಂತ ದೊಡ್ಡ ಧರ್ಮವಿಲ್ಲ. ಇಂದು ನನ್ನ ಕೊನೆಯ ಉಸಿರು ಇರುವವರೆಗೂ ನನ್ನ ಹೃದಯದಲ್ಲಿ ಇದೆ. ನಾನು ಸನಾತನ ಧರ್ಮದಲ್ಲಿ ಜನಿಸಿದ್ದು ಪುಣ್ಯ ಮತ್ತು ಸನಾತನಕ್ಕಾಗಿ ಕೊನೆಯ ಉಸಿರು ಬಿಟ್ಟಿದ್ದೇನೆ. ಆದಿ ಜಗದ್ಗುರು ಶಂಕರಾಚಾರ್ಯ, ವಿಶ್ವ ಯೋಗ ಗುರುಗಳು ಮತ್ತು ಪೂಜ್ಯ ಸಂತ ಮಹಾತ್ಮರ ಆಶೀರ್ವಾದದ ಪ್ರತಿ ಕ್ಷಣವೂ ನನ್ನ ಜೀವನದಲ್ಲಿದೆ. ನಾನು ಆದಿ ಗುರು ಶಂಕರಾಚಾರ್ಯ ಮತ್ತು ದೇಶದ ಅನೇಕ ಮಹಾನ್ ಸಂತರಿಗೆ ಪತ್ರ ಬರೆದು ಅಗ್ನಿ ಪರೀಕ್ಷೆಗೆ ಕೋರಿದ್ದೆ ಆದರೆ ಏನು ಸಿಕ್ಕಿತು? ನಾನು ಈ ಲೋಕಕ್ಕೆ ಶಾಶ್ವತ ವಿದಾಯ ಹೇಳುತ್ತಿದ್ದೇನೆ. ಆದರೆ, ನನಗೆ ದೇವರಲ್ಲಿ ಮತ್ತು ಗೌರವಾನ್ವಿತ ಸಂತ ಮಹಾತ್ಮರಲ್ಲಿ ಪೂರ್ಣ ನಂಬಿಕೆಯಿದೆ. ನಾನು ಬದುಕಿದ್ದರೂ ಅಥವಾ ನಾನು ಹೋದ ಮೇಲಾದರೂ ನ್ಯಾಯ ಸಿಗುತ್ತದೆ” ಎಂದು ಪೋಸ್ಟ್ನಲ್ಲಿದೆ.
ಸಾಫ್ಟ್ ಪ್ರೇಮ್ ಬೈಸಾ ಸಾವಿನ ಕುರಿತು ಹಲವು ಅನುಮಾನಗಳೆದ್ದಿದ್ದು, ಭಕ್ತರು ಪಾರದರ್ಶಕ ತನಿಖೆಗೆ ಆಗ್ರಹಿಸಿ ಆಶ್ರಮದಲ್ಲಿ ಪ್ರತಿಭಟನೆ ನಡೆಸಿದರು.






