ಇತರೆ

ಧರ್ಮಸ್ಥಳ ಕೇಸ್ ಗೆ ಹೊಸ ತಿರುವು..! ತನಿಖೆ ಕೋರಿ ಸೌಜನ್ಯ ತಾಯಿ ಸುಪ್ರೀಂಗೆ ಅರ್ಜಿ

Views: 114

ಕನ್ನಡ ಕರಾವಳಿ ಸುದ್ದಿ: ಧರ್ಮಸ್ಥಳದ ಪೊಲೀಸ್ ಠಾಣೆಯಲ್ಲಿ ಕಳೆದ ಕೆಲವು ವರ್ಷಗಳಿಂದ ದಾಖಲಾಗಿರುವ 74 ಮಹಿಳೆಯರ ನಾಪತ್ತೆ ಪ್ರಕರಣಗಳು ಹಾಗೂ ಅನಾಥ ಶವಗಳ ಪ್ರಕರಣಗಳಿಗೆ ಸಂಬಂಧಿಸಿ ಹೊಸದಾಗಿ ತನಿಖೆ ನಡೆಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮಾ. 23ಕ್ಕೆ ಮುಂದೂಡಿದೆ.

ಧರ್ಮಸ್ಥಳದಲ್ಲಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಸೌಜನ್ಯ ತಾಯಿ ಕುಸುಮಾವತಿ ಗೌಡ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ. ಸಂಜಯ್ ಕುಮಾರ್ ನೇತೃತ್ವದ ದ್ವಿ ಸದಸ್ಯ ಪೀಠ ವಿಚಾರಣೆಗೆ ಕೈಗೆತ್ತಿಕೊಂಡಿದೆ. ವಿಚಾರಣೆ ಸಮಯದಲ್ಲಿ ವಕೀಲರ ಅನುಪಸ್ಥಿತಿ ಹಿನ್ನೆಲೆಯಲ್ಲಿ ಪ್ರಕರಣವನ್ನು ಮುಂದೂಡಲಾಯಿತು. ಸತತವಾಗಿ ಎರಡು ವರ್ಷಗಳವರೆಗೆ ನೂರಾರು ಅನಾಥ ಶವಗಳನ್ನು ಹೂತುಹಾಕಿದ್ದಾಗಿ ಈ ಹಿಂದೆ ಹೇಳಿಕೆ ನೀಡಿದ್ದ ‘ಮಾಸ್ಕ ಮ್ಯಾನ್’ ಚಿನ್ನಯ್ಯ ತನ್ನ ಹೇಳಿಕೆಯಿಂದ ಹಿಂದೆ ಸರಿದಿದ್ದೇಕೆ ಎಂಬುದರ ಬಗ್ಗೆಯೂ ತನಿಖೆಯಾಗಬೇಕು ಎಂದು ಕುಸುಮ ತಮ್ಮ ಮೇಲ್ಮನವಿ ಅರ್ಜಿಯಲ್ಲಿ ಆಗ್ರಹಿಸಿದ್ದಾರೆ.

ಧರ್ಮಸ್ಥಳದ ನೇತ್ರಾವತಿ ನದಿ ದಡದಲ್ಲಿ 74 ಅನಾಥ ಶವಗಳನ್ನು ಹೂತು ಹಾಕಿರುವುದಾಗಿ ಆರೋಪಗಳು ಕೇಳಿಬಂದಿವೆ. ಆ ಎಲ್ಲಾ ಪ್ರಕರಣಗಳಲ್ಲೂ ಪ್ರತ್ಯೇಕ ಎಫ್ ಐಆರ್ ಆಗಿ ತನಿಖೆಯಾಗಬೇಕು. ಧರ್ಮಸ್ಥಳದಲ್ಲಿ ಸಿಕ್ಕ ಅನಾಥ ಶವಗಳು, ನಾಪತ್ತೆ ಪ್ರಕರಣಗಳಿಗೆ ಇದರಿಂದ ಸೂಕ್ತ ನ್ಯಾಯ ಸಿಗುವಂತಾಗಬೇಕು ಎಂದು ಅವರು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

ಅರ್ಜಿಯಲ್ಲಿ ದೋಷ, ಮರುಸಲ್ಲಿಕೆ: ಕುಸುಮಾವತಿ ಗೌಡ ಅವರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯಲ್ಲಿ ಕೆಲವು ತಾಂತ್ರಿಕ ದೋಷಗಳಿದ್ದ ಹಿನ್ನೆಲೆಯಲ್ಲಿ ದೋಷಗಳನ್ನು ಸರಿಪಡಿಸಿ ಮರು ಅರ್ಜಿ ಸಲ್ಲಿಸಲು ಅರ್ಜಿದಾರರ ಪರ ವಕೀಲರಿಗೆ ಸುಪ್ರೀಂಕೋರ್ಟ್ 90 ದಿನಗಳ ಕಾಲಾವಕಾಶ ನೀಡಿತ್ತು. ಇದರಂತೆ ಕುಸುಮಾವತಿ ಗೌಡ ಅವರ ಪರ ವಕೀಲರು 2025ರ ನವೆಂಬರ್ 19ರಂದು ಅರ್ಜಿಯನ್ನು ಮರುಸಲ್ಲಿಸಿದ್ದರು. ಇದೀಗ ಈ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಕೈಗೆತ್ತಿಕೊಂಡಿದೆ. ಸಿಬಿಐ, ಕರ್ನಾ ಟಕ ರಾಜ್ಯ ಸರಕಾರ, ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಮತ್ತು ಪ್ರಕರಣದ ಆರೋಪಿಯಾಗಿದ್ದ ಸಂತೋಷ್ ರಾವ್‌ರನ್ನು ಪ್ರತಿವಾದಿಗಳನ್ನಾಗಿ ಅರ್ಜಿ ಯಲ್ಲಿ ಉಲ್ಲೇಖಿಸಲಾಗಿದೆ. ಸಂತೋಷ್ ರಾವ್ ಕೂಡ 2025ರ ಸೆಪ್ಟೆಂಬರ್ 2ರಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಈ ಅರ್ಜಿಯಲ್ಲಿಯೂ ದೋಷಗಳಿರುವುದರಿಂದ ಮರು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು.

ಹೈ ಆದೇಶ ಪ್ರಶ್ನಿಸಿ ಸುಪ್ರೀಂಗೆ ಮೊರೆ

ಸೌಜನ್ಯ ಪ್ರಕರಣದಲ್ಲಿ ಆರೋಪಿಯಾಗಿದ್ದ ಸಂತೋಷ್ ರಾವ್ ಅವರನ್ನು ಸೆಷನ್ಸ್ ನ್ಯಾಯಾಲಯ ಹಾಗೂ ನಂತರ ಸಿಬಿಐ ನ್ಯಾಯಾಲಯವು ಆರೋಪ ಸಾಬೀತಾಗದ ಹಿನ್ನೆಲೆಯಲ್ಲಿ ಖುಲಾಸೆ ಗೊಳಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ಹಾಗೂ ಪ್ರಕರಣದ ಮರು ತನಿಖೆಗೆ ಆಗ್ರಹಿಸಿ ಸೌಜನ್ಯ ತಾಯಿ ಕುಸುಮಾವತಿ ಗೌಡ ಅವರು ಮೊದಲು ಅವರ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಹೈಕೋರ್ಟ್ ದ್ವಿಸದಸ್ಯ ಪೀಠವು ಅರ್ಜಿಯನ್ನು ವಜಾಗೊಳಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ, ವಿಶೇಷ ಅನುಮತಿ ಮೇಲ್ಮನವಿ ಅರ್ಜಿ ಸಲ್ಲಿಸುವ ಮೂಲಕ ಕುಸುಮಾವತಿ ಗೌಡ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.

Related Articles

Back to top button
error: Content is protected !!