ಕುಂದಾಪುರ: ಹಾಲಾಡಿಯಲ್ಲಿ 2 ಮಂಗಗಳ ಶವ ಪತ್ತೆ, ಜನರಲ್ಲಿ ಮತ್ತಷ್ಟು ಭೀತಿ!
Views: 81
ಕನ್ನಡ ಕರಾವಳಿ ಸುದ್ದಿ: ಹೊಸಂಗಡಿ, ಶಂಕರನಾರಾಯಣ, ಸಿದ್ದಾಪುರ,ಮಡಾಮಕ್ಕಿ ಬಳಿಕ ಈಗ ಹಾಲಾಡಿಯಲ್ಲೂ 2 ಮಂಗಗಳ ಶವ ಕೊಳೆತ ಸ್ಥಿತಿಯಲ್ಲಿ ಗುರುವಾರ ಪತ್ತೆಯಾಗಿದೆ.
ಮಲೆನಾಡು ಜಿಲ್ಲೆಗಳಲ್ಲಿ ಮಂಗನ ಕಾಯಿಲೆ ಕಾಣಿಸಿ ಕೊಂಡಿರುವುದರಿಂದ ಈಗ ಕುಂದಾಪುರ ತಾಲೂಕಿನ ಪಶ್ಚಿಮ ಘಟ್ಟದ ತಪ್ಪಲಿನ ಮತ್ತೊಂದು ಗ್ರಾಮದಲ್ಲಿ ಮಂಗ ಸಾವನ್ನಪ್ಪಿರುವುದು ಜನರಲ್ಲಿ ಮತ್ತಷ್ಟು ಭೀತಿ ಮೂಡಿಸಿದೆ. ಮಂಗಗಳ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವುದರಿಂದ ಅವುಗಳ ಸ್ಯಾಂಪಲ್ ಗಳನ್ನು ಸಂಗ್ರಹಿಸಲು ಕಷ್ಟಸಾಧ್ಯವಾಗಿದೆ.
ಈಗಾಗಲೇ ಮೊದಲ ಬಾರಿಗೆ ಮಂಗಗಳ ಶವ ಪತ್ತೆಯಾದ ಹೊಸಂಗಡಿಯ ಕಾರೂರು ಪ್ರದೇಶದಿಂದ ಉಣುಗು (ಉಣ್ಣೆ) ಹಾಗೂ ಮಡಾಮಕ್ಕಿಯ ಮಾರ್ಮಣ್ಣು ಪ್ರದೇಶದಲ್ಲಿ ಸಾವನ್ನಪ್ಪಿದ ಮಂಗಗಳ ಪೈಕಿ 1 ಮಂಗನ ಶವದ ಸ್ಯಾಂಪಲ್ ಗಳನ್ನುಸಂಗ್ರಹಿಸಿ ಕೆಎಫ್ ಡಿ ರೋಗದ ಲಕ್ಷಣಗಳು ಇವೆಯೇ ಅನ್ನುವುದನ್ನು ಪತ್ತೆ ಹಚ್ಚಲು ಕಳುಹಿಸಲಾಗಿದೆ. ಅದರ ವರದಿ ಇನ್ನೂ ಬಂದಿಲ್ಲ. ಅದು ಬಂದ ಬಳಿಕವಷ್ಟೇ ಮಂಗಗಳ ಸಾವಿನ ಕುರಿತಂತೆ ಸ್ಪಷ್ಟತೆ ಸಿಗಬಹುದು ಎನ್ನುವುದಾಗಿ ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ ಡಾ| ಬಸವರಾಜು ಹುಬ್ಬಳ್ಳಿ ತಿಳಿಸಿದ್ದಾರೆ.






