ದೆವ್ವ ಬಿಡಿಸುತ್ತೇವೆಂದು ಭೀಕರ ಹಲ್ಲೆಗೊಳಗಾದ ಮಹಿಳೆ ಸಾವು!
Views: 76
ಕನ್ನಡ ಕರಾವಳಿ ಸುದ್ದಿ: ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆಯೊಬ್ಬರಿಗೆ ಮಾರಣಾಂತಿಕವಾಗಿ ಹಲ್ಲೆ ಮಾಡಲಾಗಿದ್ದು, ಈ ವೇಳೆ ಮಹಿಳೆ ಸಾವನ್ನಪ್ಪಿದ್ದಾಳೆ ಎಂದು ತಿಳಿದು ಬಂದಿದೆ.
ಕಲಬುರಗಿಯ ಆಳಂದದಲ್ಲಿ ಈ ಘಟನೆ ನಡೆದಿದೆ. ದೆವ್ವ ಹಿಡಿದಿದೆ ಎಂದು ಬೇವಿನ ಕಟ್ಟಿಗೆಯಿಂದ ಹಲ್ಲೆ ನಡೆಸಿದ ಪರಿಣಾಮ ಗಂಭೀರ ಗಾಯಗೊಂಡು ಮಹಿಳೆ ಸಾವನ್ನ ಪ್ಪಿದ್ದಾರೆ ಎಂದು ಹೇಳಲಾಗಿದೆ.
ಸಂತ್ರಸ್ತ ಮಹಿಳೆಯನ್ನು ಆಳಂದ ಮೂಲದ ಮುಕ್ತಾ ಬಾಯಿ (26) ಎಂದು ಗುರುತಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಕಲಬುರಗಿಯ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿಕೊಳ್ಳ ಲಾಗಿದ್ದು, ಮುಂದಿನ ಕಾನೂನು ಕ್ರಮ ಹಾಗೂ ತನಿಖೆಗಾಗಿ ಪ್ರಕರಣವನ್ನು ಮಹಾರಾಷ್ಟ್ರದ ಮುರುಮ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.
ಮೂಲಗಳ ಪ್ರಕಾರ ಮುಕ್ತಾಬಾಯಿ ಕುಟುಂಬಸ್ಥರೇ ಆಕೆಗೆ ದೆವ್ವ ಹಿಡಿದಿದೆ ಎಂದು ಆರೋಪಿಸಿದ್ದರು. ಅದರಂತೆ ಗಂಡನ ಮನೆಯವರು, ಬೇವಿನ ಕಟ್ಟಿಗೆಯಿಂದ ಆಕೆ ಮೇಲೆ ಭೀಕರವಾಗಿ ಹಲ್ಲೆ ನಡೆಸಿದ ಪರಿಣಾಮ ಮುಕ್ತಾಬಾಯಿ ಎಂಬವರು ಗಂಭೀರವಾಗಿ ಗಾಯಗೊಂಡಿದ್ದರು. ಈ ವೇಳೆ ತಾಯಿ ತಿಪ್ಪವ್ವ ಹೊಡೆಯಬೇಡಿ ಎಂದು ಎಷ್ಟೇ ಬೇಡಿಕೊಂಡರೂ, ಹೊಡೆಯುವುದನ್ನು ನಿಲ್ಲಿಸಿಲ್ಲ. ಅವರನ್ನು ಕಲಬುರಗಿ ಜಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮುಕ್ತಾಬಾಯಿ ಕೊನೆಯುಸಿರೆಳೆದಿದ್ದಾರೆ.
ಕುಟುಂಬಸ್ಥರು ಹೇಳುವಂತೆ ಆಳಂದ ಪಟ್ಟಣದ ವೆಂಕಟೇಶ್ವರ ನಗರದ ನಿವಾಸಿಯಾದ ಮುಕ್ತಾಬಾಯಿಯವರನ್ನು ಆರು ವರ್ಷಗಳ ಹಿಂದೆ ಮಹಾರಾಷ್ಟ್ರದ ಮುರುಮ್ ಗ್ರಾಮದ ಗಿಡ್ಡೆಪ್ಪ ಎಂಬಾತನಿಗೆ ವಿವಾಹ ಮಾಡಿಕೊಡಲಾಗಿತ್ತು. ಈ ದಂಪತಿಗೆ ಐದು ವರ್ಷದ ಮಗನಿದ್ದಾನೆ. ಆದರೆ, ಕಳೆದ ಕೆಲವು ದಿನಗಳಿಂದ ಮುಕ್ತಾಬಾಯಿಗೆ ದೆವ್ವ ಹಿಡಿದಿದೆ ಎಂದು ಗಂಡನ ಮನೆಯವರು ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಮಗಳಿಗೆ ಯಾವುದೇ ದೆವ್ವ ಹಿಡಿದಿಲ್ಲ, ಆಕೆಯನ್ನು ಹೊಡೆಯಬೇಡಿ ಎಂದು ತಾಯಿ ತಿಪ್ಪವ್ವ ಎಷ್ಟೇ ಮನವಿ ಮಾಡಿದರೂ ಗಂಡನ ಮನೆಯವರು ಕೇಳಿರಲಿಲ್ಲ ಎಂದು ಆರೋಪಿಸಲಾಗಿದೆ.






