ಇತರೆ

ಹೆಬ್ರಿ ಕೂಡ್ಲು ಜಲಪಾತದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದ ಯುವಕ ಸಾವು 

Views: 113

ಕನ್ನಡ ಕರಾವಳಿ ಸುದ್ದಿ: ಸೀತಾನದಿ ಸಮೀಪದ ಪ್ರಸಿದ್ಧ ಪ್ರವಾಸಿ ತಾಣವಾದ ಕೂಡ್ಲು ಜಲಪಾತದಲ್ಲಿ ಬಂಡೆಕಲ್ಲಿನಿಂದ ಜಾರಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಯುವಕ ಮನ್ವಿತ್ (25), ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಹೆಬ್ರಿ ತಾಲ್ಲೂಕಿನ ಆರ್ಡಿ ಕೊಂಜಾಡಿ ನಿವಾಸಿಯಾದ ಮನ್ವಿತ್ ತಮ್ಮ ಪೋಷಕರೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿದ್ದರು. ಡಿಸೆಂಬರ್ 12ರಂದು ಅವರು ಊರಿಗೆ ಬಂದಿದ್ದರು. ಡಿ. 14ರಂದು ಸ್ನೇಹಿತರ ಜೊತೆಗೂಡಿ ಕೂಡ್ಲು ಜಲಪಾತಕ್ಕೆ ವಿಹಾರಕ್ಕೆ ತೆರಳಿದ್ದರು.

ಜಲಪಾತದ ಬಳಿ ಸ್ನೇಹಿತರೆಲ್ಲರೂ ಸ್ನಾನ ಮಾಡುತ್ತಿದ್ದಾಗ, ಮನ್ವಿತ್ ಎತ್ತರದ ಬಂಡೆಕಲ್ಲಿನ ಮೇಲೆ ಕುಳಿತುಕೊಂಡಿದ್ದರು. ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಕೆಳಕ್ಕೆ ಬಿದ್ದ ಪರಿಣಾಮ ಅವರ ತಲೆಗೆ ಗಂಭೀರ ಪೆಟ್ಟಾಗಿತ್ತು. ತಕ್ಷಣ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ. ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button