ಇತರೆ

ಹೆಂಡತಿಯನ್ನು ಮುಗಿಸಲು ಸುಪಾರಿ ಕೊಟ್ಟ ಗಂಡ!

Views: 124

ಕನ್ನಡ ಕರಾವಳಿ ಸುದ್ದಿ: ಕ್ಷುಲ್ಲಕ ಕಾರಣಕ್ಕೆ ಹೆಂಡತಿಯನ್ನು ಕೊಲ್ಲಲು ಸುಪಾರಿ ಕೊಟ್ಟ ಘಟನೆ ಮೈಸೂರಿನ ಬಿಎಂಶ್ರೀ ನಗರದಲ್ಲಿ ನಡೆದಿದೆ. ಗಂಡನ ಈ ಕೃತ್ಯಕ್ಕೆ ಆತನ ಸ್ನೇಹಿತರೂ ಸಾಥ್ ನೀಡಿದ್ದು, ಮಾಹಿತಿ ತಿಳಿದ ಮೇಟಗಳ್ಳಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಪಾನಿಪುರಿ ವ್ಯಾಪಾರ ಮಾಡುತ್ತಿದ್ದ ಮಹೇಶ್, ಕ್ಷುಲ್ಲಕ ಕಾರಣಕ್ಕೆ ಪತ್ನಿ ನಾಗರತ್ನ ಕೊಲೆಗೆ 5 ಲಕ್ಷ ರೂ. ಸುಪಾರಿ ನೀಡಿದ್ದ. ಗಂಡನ ಸಂಪಾದನೆಯನ್ನು ಬಡ್ಡಿಗೆ ಬಿಡುತ್ತಿದ್ದ ಪತ್ನಿ, ಮಹೇಶ್ಗೆ ಹಣ ನೀಡುತ್ತಿರಲಿಲ್ಲ. ಇದರಿಂದ ಅಸಮಾಧಾನಗೊಂಡ ಮಹೇಶ್, ತನಗೆ ಕಿಂಚಿತ್ತೂ ಮರ್ಯಾದೆ ಕೊಡದ ಪತ್ನಿ ಕೊಲೆಗೆ ಸ್ಕೆಚ್ ಹಾಕಿದ್ದ. ಮನೆಗೆ ನುಗ್ಗಿ ಗ್ಯಾಸ್ ಪೈಪ್ ಕತ್ತರಿಸಿ ಪೆಟ್ರೋಲ್ ಸುರಿದು ಹೆಂಡತಿಯನ್ನು ಮುಗಿಸಿ ಎಂದು ಪ್ಲಾನ್ ರೂಪಿಸಿದ್ದ.

ಆತನ ಪ್ಲಾನ್ ಪ್ರಕಾರವೇ ವಿರಾಜಪೇಟೆ ಮೂಲದ ಭಾಸ್ಕರ್ ಮತ್ತು ಅಭಿಷೇಕ್ ಎನ್ನುವವರಿಬ್ಬರೂ ನಾಗರತ್ನ ಒಬ್ಬರೇ ಇರುವ ಸಮಯ ನೋಡಿಕೊಂಡು ಮನೆಗೆ ಬಂದಿದ್ದರು. ಈ ವೇಳೆ ಮಹಿಳೆಯ ತಲೆಗೆ ಸುತ್ತಿಗೆಯಿಂದ ಹೊಡೆದು ಕೊಲೆಗೆ ಯತ್ನಿಸಿದ್ದರು. ಹಲ್ಲೆಯ ನಂತರ ಗ್ಯಾಸ್ ಸಿಲಿಂಡರ್‌ಗಳನ್ನು ಸೋರಿಕೆ ಮಾಡಿದ ಆರೋಪಿಗಳು , ಘಟನೆಯನ್ನು ಅಗ್ನಿ ಅವಘಡ ಎಂದು ಬಿಂಬಿಸಲು ಯತ್ನಿಸಿದ್ದರು. ಈ ವೇಳೆ ಮನೆಯ ಹಲವು ವಸ್ತುಗಳು ಬೆಂಕಿಗಾಹುತಿಯಾಗಿದ್ದವು.

ಗಾಯಗೊಂಡ ನಾಗರತ್ನರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ತನ್ನದೇ ಸ್ನೇಹಿತರಿಗೆ ಸುಪಾರಿ ಕೊಟ್ಟಿದ್ದ ಮಹೇಶ್ ಸೇರಿದಂತೆ ಕೊಲೆಗೆ ಯತ್ನಿಸಿದ್ದ ಆರೋಪಿಗಳನ್ನು ಮೇಟಗಳ್ಳಿ ಪೊಲೀಸರು ಬಂಧಿಸಿದ್ದಾರೆ. ತನಿಖೆ ವೇಳೆ ಗಂಡನೇ ಪತ್ನಿಯನ್ನು ಕೊಲ್ಲುವಂತೆ ಸುಪಾರಿ ನೀಡಿದ್ದ ವಿಚಾರ ಬೆಳಕಿಗೆ ಬಂದಿದೆ.

Related Articles

Back to top button