ಕುರ್ಚಿ ಕಿತ್ತಾಟ, ಕಾಂಗ್ರೆಸ್ನಲ್ಲಿ ಬಣ ರಾಜಕೀಯ ಮತ್ತೆ ಬಿರುಸು
Views: 38
ಕನ್ನಡ ಕರಾವಳಿ ಸುದ್ದಿ: ರಾಜ್ಯ ಕಾಂಗ್ರೆಸ್ನಲ್ಲಿ ಅಧಿಕಾರ ಹಂಚಿಕೆಯ ಕದನ ಮತ್ತೆ ತಾರಕಕ್ಕೇರಿದ್ದು, ವಿಧಾನಮಂಡಲದ ಅಧಿವೇಶನ ನಡೆಯುತ್ತಿರುವ ಬೆಳಗಾವಿಯಲ್ಲಿ ಕುರ್ಚಿ ಕಿತ್ತಾಟ, ಬಣ ರಾಜಕೀಯ, ಔತಣಕೂಟಗಳ ಮೇಲಾಟ ನಡೆದಿದೆ.
ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳ ಬ್ರೇಕ್ಫಾಸ್ಟ್ ನಂತರ ಕುರ್ಚಿ ಕಿತ್ತಾಟಕ್ಕೆ ಬೆಂಗಳೂರಿನಲ್ಲೇ ವಿರಾಮ ಬಿದ್ದು ಅಧಿವೇಶನದಲ್ಲಿ ಒಗ್ಗಟ್ಟು ಕಾಯ್ದುಕೊಳ್ಳುವ ಮಂತ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಪಿಸಿದ್ದರು. ಆದರೆ, ಬೆಳಗಾವಿಯ ಅಧಿವೇಶನದ ಹೊತ್ತಿನಲ್ಲೇ ಕಾಂಗ್ರೆಸ್ನಲ್ಲಿ ಒಗ್ಗಟ್ಟು ಮಾಯವಾಗಿ ಬಣ ರಾಜಕೀಯ ಬಿರುಸಾಗಿ ನಾಯಕತ್ವ ಬದಲಾವಣೆ ಪರ-ವಿರೋಧ ಚಟುವಟಿಕೆಗಳು ಮತ್ತೆ ಗರಿಗೆದರಿ ತಾರಕಕ್ಕೇರಿವೆ.
ಎರಡು ದಿನಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಲ ಶಾಸಕರೊಂದಿಗೆ ಮಾಜಿ ಶಾಸಕ ಫಿರೋಜ್ ಸೇಠ್ ಅವರ ನಿವಾಸದಲ್ಲಿ ತಮ್ಮ ಆಪ್ತರೊಂದಿಗೆ ಔತಣ ಕೂಟದಲ್ಲಿ ಭಾಗವಹಿಸಿದ್ದರು. ಇದಾದ ಬಳಿಕ ಎರೆಡೆರಡು ಬಾರಿ ಮುಖ್ಯಮಂತ್ರಿ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ನಾಯಕತ್ವ ಬದಲಾವಣೆ ಇಲ್ಲ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದು ಕಾಂಗ್ರೆಸ್ನಲ್ಲಿ ಕುರ್ಚಿ ಕಿತ್ತಾಟಕ್ಕೆ ಕಿಚ್ಚು ಹಚ್ಚಿದಂತಾಗಿದೆ.
ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆ ಬೆನ್ನಲ್ಲೆ ನಿನ್ನೆ ಸದನದಲ್ಲಿ ತಮ್ಮ ಆಪ್ತ ಶಾಸಕರೊಂದಿಗೆ ಸಮಾಲೋಚನೆ ನಡೆಸಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ನಿನ್ನೆ ರಾತ್ರಿ ಔತಣಕೂಟದ ನೆಪದಲ್ಲಿ ತಮ್ಮ ಶಕ್ತಿ ಪ್ರದರ್ಶನವನ್ನು ತೋರಿದ್ದಾರೆ.
ಬೆಳಗಾವಿಯ ಹೊರವಲಯದ ತೋಟದ ಮನೆಯಲ್ಲಿ ನಡೆದ ಈ ಔತಣಕೂಟದಲ್ಲಿ ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ, ಮೀನುಗಾರಿಕೆ ಸಚಿವ ಮಾಂಕಾಳ ವೈದ್ಯ, ಕೃಷಿ ಸಚಿವ ಚಲುವರಾಯಸ್ವಾಮಿ ಸೇರಿದಂತೆ 30 ಕ್ಕೂ ಹೆಚ್ಚು ಶಾಸಕರು ವಿಧಾನಸಭಾ ಸದಸ್ಯರು, 15 ವಿಧಾನಪರಿಷತ್ ಸದಸ್ಯರು, ಡಿಕೆಶಿ ಸಹೋದರ ಹಾಗೂ ಮಾಜಿ ಸಂಸದ ಡಿ.ಕೆ. ಸುರೇಶ್ ಸಹ ಪಾಲ್ಗೊಂಡಿದ್ದು ಇದರ ಜತೆಗೆ ಬಿಜೆಪಿಯಿಂದ ಉಚ್ಚಾಟಿತರಾದ ವಿಶ್ವನಾಥ್, ಶಿವರಾಮ್ ಹೆಬ್ಬಾರ್ ಸಹ ಔತಣಕೂಟದಲ್ಲಿ ಭಾಗಿಯಾಗಿದ್ದರು ಎಂದು ಹೇಳಲಾಗಿದೆ.
ಅಧಿವೇಶನ ನಡೆದಿರುವ ಹೊತ್ತಿನಲ್ಲಿ ಕಾಂಗ್ರೆಸ್ನಲ್ಲಿ ಬಣ ರಾಜಕೀಯ ಮೇಳೈಸಿ ಔತಣಕೂಟದ ರಾಜಕೀಯ ಬಿರುಸಾಗಿದ್ದು, ಮುಂದಿನ ದಿನಗಳಲ್ಲಿ ಕಾಂಗ್ರೆಸ್ನಲ್ಲಿ ಹಲವು ಮಹತ್ತರ ಬದಲಾವಣೆಗಳಾಗುವ ಸಾಧ್ಯತೆಗಳನ್ನು ಈ ಔತಣಕೂಟಗಳು ಸಂಕೇತಿಸಿವೆ.






