ವಿವಾಹ ಆರತಕ್ಷತೆಯ ಸ್ಟೇಜ್ ಕುಸಿದು ಬಿದ್ದು ವಧು-ವರರಿಗೆ ಗಾಯ!
Views: 65
ಕನ್ನಡ ಕರಾವಳಿ ಸುದ್ದಿ:ವಿವಾಹ ಆರತಕ್ಷತೆ ನಡೆಯುವ ಸಂದರ್ಭದಲ್ಲಿ ಸ್ಟೇಜ್ ಕುಸಿದು ಬಿದ್ದು ಮಾಜಿ ಸಂಸದರು ಸೇರಿದಂತೆ ಬಿಜೆಪಿಯ ಪ್ರಮುಖ ನಾಯಕರು ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯಲ್ಲಿ ನಡೆದಿದೆ. ಈ ಕುರಿತ ವೀಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಬಿಜೆಪಿ ಕಾರ್ಯಕರ್ತನ ಸಹೋದರನ ವಿವಾಹ ಆರತಕ್ಷತೆ ಸಮಾರಂಭದಲ್ಲಿ ಸ್ಟೇಜ್ ಕುಸಿದು ಬಿದ್ದಿದ್ದು, ಬಿಜೆಪಿ ಪ್ರಮುಖ ನಾಯಕರು ಗಾಯಗೊಂಡಿದ್ದಾರೆ. ಸ್ಥಳೀಯ ಬಿಜೆಪಿ ಕಾರ್ಯಕರ್ತ ಅಭಿಷೇಕ್ ಸಿಂಗ್ ಅವರ ಸಹೋದರನ ವಿವಾಹ ಆರತಕ್ಷತೆಯಲ್ಲಿ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ.
ನವವಿವಾಹಿತ ದಂಪತಿಯನ್ನು ಆಶೀರ್ವದಿಸಲು ಅನೇಕ ರಾಜಕೀಯ ನಾಯಕರು ಒಂದೇ ಸಮಯದಲ್ಲಿ ವೇದಿಕೆ ಮೇಲೆ ಜಮಾಯಿಸಿದ್ದರು. ಬಿಜೆಪಿ ನಾಯಕರು ದಂಪತಿಗೆ ಶುಭಾಶಯ ತಿಳಿಸಿ, ನಂತರ ಫೋಟೋ ತೆಗೆದುಕೊಳ್ಳಲು ಹಿಂಬದಿ ನಿಲ್ಲುತ್ತಾರೆ. ವಧು-ವರ ಸೋಫಾದಲ್ಲಿ ಕುಳಿತುಕೊಳ್ಳುತ್ತಾರೆ. ಆದರೆ ಕೆಲವೇ ಕ್ಷಣಗಳಲ್ಲಿ ಮರದ ಹಲಗೆಗಳಿಂದ ನಿರ್ಮಿಸಲಾದ ವೇದಿಕೆ ಕುಸಿದು ಬೀಳುತ್ತದೆ.
ಪರಿಣಾಮ ದಂಪತಿ ಸೇರಿದಂತೆ ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ್ ಮಿಶ್ರಾ, ಮಾಜಿ ಸಂಸದ ಭರತ್ ಸಿಂಗ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರ್ಜೀತ್ ಸಿಂಗ್ ಹಾಗೂ ಹಲವಾರು ಸ್ಥಳೀಯ ಕಾರ್ಯಕರ್ತರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.






