ತಾಯಿಯ ಎದೆಹಾಲಿನಲ್ಲಿ ಅಪಾಯ ವಿಷಕಾರಿ ‘ಯುರೇನಿಯಂ’ ಪತ್ತೆ!
Views: 118
ಕನ್ನಡ ಕರಾವಳಿ ಸುದ್ದಿ: ಬಾಣಂತಿಯರ ಎದೆಹಾಲಿನಲ್ಲಿ ಅಪಾಯಕಾರಿ ವಿಕಿರಣಶೀಲ ಧಾತುವಾದ ‘ಯುರೇನಿಯಂ’ ಪತ್ತೆಯಾಗಿದೆ ಎಂಬ ಆತಂಕಕಾರಿ ಸಂಗತಿ ಬಿಹಾರದಲ್ಲಿ ಬೆಳಕಿಗೆ ಬಂದಿದೆ.
ಪಾಟ್ನಾದ ಮಹಾವೀರ ಕ್ಯಾನ್ಸರ್ ಸಂಸ್ಥಾನ ಹಾಗೂ ನವದೆಹಲಿಯ ಪ್ರಖ್ಯಾತ ಏಮ್ಸ್ (AIIMS) ಆಸ್ಪತ್ರೆಯ ವೈದ್ಯರು ಜಂಟಿಯಾಗಿ ಈ ಸಂಶೋಧನೆಯನ್ನು ಕೈಗೊಂಡಿದ್ದರು. ಡಾ. ಅಶೋಕ್ ಶರ್ಮಾ ನೇತೃತ್ವದ ತಜ್ಞರ ತಂಡವು 2021ರ ಅಕ್ಟೋಬರ್‌ನಿಂದ 2024ರ ಜುಲೈ ತಿಂಗಳವರೆಗೆ ದೀರ್ಘಾವಧಿಯ ಅಧ್ಯಯನ ನಡೆಸಿತು.
ಬಿಹಾರದ ಭೋಜ್‌ಪುರ, ಸಮಷ್ಟಿಪುರ, ಬೇಗುಸರಾಯ್, ಖಗೇರಿಯಾ, ಕಟಿಹಾರ್ ಮತ್ತು ನಳಂದಾ ಜಿಲ್ಲೆಗಳ 17 ರಿಂದ 35 ವರ್ಷದೊಳಗಿನ ಸುಮಾರು 40 ತಾಯಂದಿರ ಎದೆಹಾಲಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸಲಾಗಿತ್ತು.
ಪರೀಕ್ಷೆಗೆ ಒಳಪಡಿಸಿದ ಎಲ್ಲಾ ಮಾದರಿಗಳಲ್ಲೂ ಯುರೇನಿಯಂ (U238) ಅಂಶ ಪತ್ತೆಯಾಗಿದೆ. ಇದರ ಸಾಂದ್ರತೆಯು ಲೀಟರ್‌ಗೆ 5.25 ರವರೆಗೂ ಕಂಡುಬಂದಿದೆ. ಇದರ ಸಣ್ಣ ಪ್ರಮಾಣದ ಇರುವಿಕೆಯೂ ಅಪಾಯಕಾರಿಯೇ. ಖಗೇರಿಯಾ ಜಿಲ್ಲೆಯ ಮಾದರಿಗಳಲ್ಲಿ ಅತಿ ಹೆಚ್ಚು ಯುರೇನಿಯಂ ಕಂಡುಬಂದರೆ, ನಳಂದಾದಲ್ಲಿ ಕಡಿಮೆ ಪ್ರಮಾಣ ವರದಿಯಾಗಿದೆ.
ಮಕ್ಕಳ ಮೇಲಾಗುವ ಪರಿಣಾಮಗಳೇನು?: ಈ ಬೆಳವಣಿಗೆಯು ಸುಮಾರು ಶೇ. 70 ರಷ್ಟು ಹಸುಳೆಗಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.
ಯುರೇನಿಯಂ ನೇರವಾಗಿ ಮಕ್ಕಳ ಮೂತ್ರಪಿಂಡಗಳಿಗೆ ಹಾನಿ ಮಾಡುತ್ತದೆ.ಇದು ವಿಕಿರಣಶೀಲ ಧಾತುವಾಗಿರುವುದರಿಂದ ಭವಿಷ್ಯದಲ್ಲಿ ಮಕ್ಕಳಿಗೆ ಕ್ಯಾನ್ಸರ್ ಬರುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಮಕ್ಕಳ ನರಮಂಡಲದ ಮೇಲೆ ದಾಳಿ ಮಾಡುವ ಈ ವಿಷವು, ಅವರ ಅರಿವಿನ ಸಾಮರ್ಥ್ಯ ಮತ್ತು ದೈಹಿಕ ಬೆಳವಣಿಗೆಯನ್ನು ಕುಂಠಿತಗೊಳಿಸಬಹುದು. ಮಗುವಿನ ತೂಕ ಕಡಿಮೆಯಾಗುವ ಸಂಭವವೂ ಇರುತ್ತದೆ.
ಎದೆಹಾಲಿಗೆ ಯುರೇನಿಯಂ ಬಂದಿದ್ದು ಹೇಗೆ?: ಈ ವಿಷಯದಲ್ಲಿ ಪರಿಸರ ಮಾಲಿನ್ಯವೇ ಮುಖ್ಯ ಆರೋಪಿಯಾಗಿದೆ. ಬಿಹಾರದಲ್ಲಿ ಕುಡಿಯಲು ಮತ್ತು ವ್ಯವಸಾಯಕ್ಕೆ ಅಂತರ್ಜಲವನ್ನೇ ಹೆಚ್ಚಾಗಿ ಅವಲಂಬಿಸಲಾಗಿದೆ.
ಆಹಾರ ಸರಪಳಿ: ಮಣ್ಣು ಮತ್ತು ನೀರಿನಲ್ಲಿರುವ ಯುರೇನಿಯಂ ಅನ್ನು ಬೆಳೆಗಳು ಹೀರಿಕೊಳ್ಳುತ್ತವೆ. ಕಲುಷಿತ ನೀರು ಮತ್ತು ಆಹಾರವನ್ನು ಸೇವಿಸುವ ತಾಯಂದಿರ ದೇಹಕ್ಕೆ ಯುರೇನಿಯಂ ಸೇರುತ್ತದೆ, ಅಲ್ಲಿಂದ ಅದು ಎದೆಹಾಲಿನ ಮೂಲಕ ಮಗುವಿಗೆ ವರ್ಗಾವಣೆಯಾಗುತ್ತದೆ.
ರಾಸಾಯನಿಕ ಗೊಬ್ಬರ: ಕೃಷಿಯಲ್ಲಿ ಬಳಸುವ ಅತಿಯಾದ ರಾಸಾಯನಿಕ ಗೊಬ್ಬರಗಳು ಮತ್ತು ಕೀಟನಾಶಕಗಳು ಭೂಮಿಯ ಆಳದಲ್ಲಿರುವ ಯುರೇನಿಯಂ ಅಂತರ್ಜಲಕ್ಕೆ ಸೇರಲು ಕಾರಣವಾಗುತ್ತವೆ.
ಕೈಗಾರಿಕಾ ತ್ಯಾಜ್ಯ: ಸಂಸ್ಕರಿಸದ ಕಾರ್ಖಾನೆಗಳ ತ್ಯಾಜ್ಯಗಳನ್ನು ನೇರವಾಗಿ ನದಿ ಅಥವಾ ಭೂಮಿಗೆ ಬಿಡುವುದರಿಂದಲೂ ಈ ಸಮಸ್ಯೆ ಉಲ್ಬಣಗೊಂಡಿದೆ.
ಈಗಾಗಲೇ ಬಿಹಾರದ ಅಂತರ್ಜಲದಲ್ಲಿ ಆರ್ಸೆನಿಕ್, ಸೀಸ ಮತ್ತು ಪಾದರಸದಂತಹ ಲೋಹಗಳು ಪತ್ತೆಯಾಗಿದ್ದವು. ಈಗ ಯುರೇನಿಯಂ ಕೂಡ ಸೇರಿಕೊಂಡಿರುವುದು ಪರಿಸ್ಥಿತಿಯ ಗಂಭೀರತೆಯನ್ನು ಹೆಚ್ಚಿಸಿದೆ.
ಕೇವಲ ಭಾರತವಲ್ಲದೆ ಕೆನಡಾ, ಯುಎಸ್, ಚೀನಾ ಮುಂತಾದ ದೇಶಗಳ ಅಂತರ್ಜಲದಲ್ಲೂ ಯುರೇನಿಯಂ ಪತ್ತೆಯಾಗಿದೆ. ಆದರೆ, ಅದು ತಾಯಿಯ ಎದೆಹಾಲಿನ ಹಂತಕ್ಕೆ ತಲುಪಿರುವುದು ಅತ್ಯಂತ ಕಳವಳಕಾರಿ ವಿಷಯವಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.






